ಉಡುಪಿ : ವಿಧ್ಯಾರ್ಥಿಗಳು ತಮ್ಮ ಪ್ರೌಢಾವಸ್ಥೆಯಲ್ಲೇ ಕೆಡುಕು ಒಳಿತುಗಳ ಪರಾಮರ್ಶೆ ನಡೆಸಿ, ದುರಾಭ್ಯಾಸಗಳಿಂದ ದೂರವಿರುವ ಜೊತೆಗೆ ಸುಸಂಸ್ಕೃತಿ, ಸನ್ನಡೆಯನ್ನು ಮೈಗೂಡಿಸಿಕೊಂಡು ವಿದ್ಯಾರ್ಜನೆಗೆ ಹೆಚ್ಚಿನ ಒಲವು ತೋರುವುದು ಅತ್ಯಗತ್ಯ. ಶಿಸ್ತುಬದ್ಧ ಜೀವನ ಕ್ರಮದಿಂದ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಉಡುಪಿ-ದೊಡ್ಡಣಗುಡ್ಡೆ ಡಾ! ಎ.ವಿ. ಬಾಳಿಗಾ ಆಸ್ಪತ್ರೆಯ ಮನೋರೋಗ ತಜ್ಞೆ ಡಾ! ಸೌಜನ್ಯಾ ತಿಳಿಸಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಂಬಲಪಾಡಿ ವಲಯ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ತಾಲೂಕು ವತಿಯಿಂದ ಆದಿಉಡುಪಿ ಪ್ರೌಢ ಶಾಲೆಯಲ್ಲಿ ನಡೆದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾದಕ ವಸ್ತುಗಳ ನಿಗ್ರಹ ಮತ್ತು ವ್ಯಸನಮುಕ್ತ ಜೀವನದ ಕುರಿತು ಸಮಗ್ರ ಮಾಹಿತಿ ನೀಡಿದರು.
ಜನ ಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆದಿಉಡುಪಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಮಾಹಿತಿಯ ಬಳಿಕ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರ ನಡೆಸಿ, ಸಿಹಿ ತಿಂಡಿ ವಿತರಿಸಲಾಯಿತು. ಆದಿಉಡುಪಿ ಪ್ರಕೃತಿ ಒಕ್ಕೂಟದ ಪದಾಧಿಕಾರಿ ದಿನೇಶ್, ಸೇವಾ ಪ್ರತಿನಿಧಿ ಶ್ವೇತಾ ಹಾಗೂ ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಂಬಲಪಾಡಿ ವಲಯ ಮೇಲ್ವಿಚಾರಕಿ ಪ್ರೇಮ ಕಾರ್ಯಕ್ರಮ ನಿರೂಪಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತಾ ಸ್ವಾಗತಿಸಿ, ಸೇವಾ ಪ್ರತಿನಿಧಿ ಗೀತಾ ವಂದಿಸಿದರು