ಉಡುಪಿ : ಅಯೋಧ್ಯೆ ರಾಮನ ಸೇವೆ ತಮಗೆ ಲಭಿಸಿರುವುದು ಗುರುಗಳಾದ ಶ್ರೀ ವಿಶ್ವೇಶ ತೀರ್ಥರ ತಪಸ್ಸಿನ ಫಲ. ಅದರ ಸರ್ವ ಕೀರ್ತಿ ರಾಮಮಂದಿರಕ್ಕಾಗಿ ಹೋರಾಡಿದ ದೇಶದ ಸಾಧು ಸಂತರಿಗೆ ಅರ್ಪಿಸುತ್ತೇನೆ ಎಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದರು.
ಅವರು ಶನಿವಾರ ನಗರದ ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ಅದಮಾರು ಮಠ ಮತ್ತು ಶ್ರೀಕೃಷ್ಣ ಸೇವಾ ಬಳಗ ವತಿಯಿಂದ ನಡೆದ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು.
ಸಾವಿರಾರು ರಾಮ ಭಕ್ತರ ಪರಿಶ್ರಮ ಹಾಗೂ ಸಹಕಾರದಿಂದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಯನ್ನು ನಮ್ಮ ಗುರುಗಳೂ ಸಹಿತ ಸರ್ವ ಸಂತರ ಪರವಾಗಿ ನೆರವೇರಿಸಿದ್ದೇನೆ. ಆದ್ದರಿಂದ ಅದರ ಕೀರ್ತಿ ಸಮಸ್ತ ಸಂತ ಸಮಾಜಕ್ಕೆ ಸಲ್ಲುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಅದಮಾರು ಶ್ರೀ ಈಶಪ್ರಿಯತೀರ್ಥರು ಆಶೀರ್ವಚನ ನೀಡುತ್ತಾ, ರಾಮಮಂದಿರ ನಿರ್ಮಾಣದ ನಂತರ, ಬಡವರ ಸೇವೆಯ ಮೂಲಕ ರಾಮರಾಜ್ಯ ಸ್ಥಾಪನೆಯಾಗಬೇಕಾಗಿದೆ ಎಂಬ ಶ್ರೀ ವಿಶ್ವಪ್ರಸನ್ನ ತೀರ್ಥರ ಕಲ್ಪನೆ ಅದ್ಭುತ, ಇದಕ್ಕೆ ಎಲ್ಲರೂ ಬದ್ದರಾಗಬೇಕು ಎಂದು ಶ್ಲಾಘಿಸಿದರು.
ವಾಗ್ನಿಗಳಾದ ಪ್ರಕಾಶ್ ಮಲ್ಪೆ ಅವರಿಂದ ‘ಜಗಜ್ಜನನಿ’ ಭಾರತ’ ಹಾಗೂ ಶ್ರೀಕಾಂತ ಶೆಟ್ಟಿ ಅವರಿಂದ ‘ಅವಿನಾಶಿ ಭಾರತ’ ವಿಷಯ ಬಗ್ಗೆ ವಿಶೇಷ ಉಪನ್ಯಾಸ ನಡೆಯಿತು.