ಹುಬ್ಬಳ್ಳಿ : ಕರ್ನಾಟಕ ಮಹಿಳೆಯರಿಗೆ ಸುರಕ್ಷಿತವಲ್ಲ, ಇದಕ್ಕೆ ಹುಬ್ಬಳ್ಳಿಯ ನೇಹಾ ಹತ್ಯೆಯೇ ಸಾಕ್ಷಿ. ನಿಮ್ಮಿಂದ (ಕಾಂಗ್ರೆಸ್) ಮಹಿಳೆಯರಿಗೆ ರಕ್ಷಣೆ ಕೊಡಲು ಆಗದಿದ್ದರೆ ಹೊರಹೋಗಿ, ನಾವು ರಕ್ಷಣೆ ನೀಡಿ ತೋರಿಸುತ್ತೇವೆ. ಕರ್ನಾಟಕವನ್ನು ಸುರಕ್ಷಿತ ತಾಣವನ್ನಾಗಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ನೆಹರು ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರ ಪ್ರಚಾರ ಭಾಷಣ ಮಾಡಿದ ಶಾ, ಹುಬ್ಬಳ್ಳಿಯ ನೇಹಾ ಹತ್ಯೆ ಹಾಗೂ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಗಳನ್ನು ಪ್ರಸ್ತಾಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆಯಾಯಿತು. ಅದಕ್ಕೆ ಹೊಣೆ ಯಾರು? ಕಾಲೇಜ್ ಕ್ಯಾಂಪಸ್‌ನಲ್ಲಿ ಹಾಡಹಗಲೇ ಯುವತಿಯ ಹತ್ಯೆಯಾಗುತ್ತದೆ ಎಂದರೆ ಮಹಿಳೆಯರಿಗೆ ಇಲ್ಲಿ ಎಷ್ಟು ಸುರಕ್ಷತೆ ಎಂಬುದು ಗೊತ್ತಾಗುತ್ತದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುತ್ತಾರೆ. ಆದರೆ, ಇವರಿಗೆ ಅದು ಕೇಳಿಸುವುದಿಲ್ಲ. ಅದು ದೆಹಲಿಯಲ್ಲಿರುವ ನಮಗೆ ಕೇಳಿಸುತ್ತದೆ. ಬೆಂಗಳೂರಲ್ಲಿ ಬಾಂಬ್ ಸ್ಪೋಟ ಆಗುತ್ತದೆ. ಅದು ಸಿಲಿಂಡರ್ ಸ್ಫೋಟ ಎಂದು ಹೇಳುತ್ತಾರೆ.” ಎನ್‌ಐಎ ತನಿಖೆ ಮಾಡಿದ ಮೇಲೆ ಅದು ದುಷ್ಕೃತ್ಯ ಎಂಬುದು ಬೆಳಕಿಗೆ ಬರುತ್ತದೆ. ಇವರೇನು ಮಾಡುತ್ತಿದ್ದಾರೆ? ಕರ್ನಾಟಕ ಸುರಕ್ಷಿತವಾಗಿದೆಯೇ? ನಿಮಗೆ ಮಹಿಳೆಯ ರಿಗೆ, ಜನರಿಗೆ ರಕ್ಷಣೆಕೊಡಲುಸಾಧ್ಯವಾಗದಿದ್ದರೆ ರಕ್ಷಣೆಯನ್ನೂ ನೀಡುತ್ತೇವೆ. ಆಡಳಿತವನ್ನು ನಡೆಸಿ ತೋರಿಸುತ್ತೇವೆ ಎಂದರು.