ಬೆಳಗಿನ ಮಂಜಿನ ಹನಿಯಲ್ಲಿ ಪ್ರಕೃತಿ ನಗುತ್ತಿದ್ದಾಳೆ.
ಹಕ್ಕಿಗಳ ಕಲರವದಲ್ಲಿ ಅವಳು ಹಾಡುತ್ತಿದ್ದಾಳೆ.
ಮರಗಳ ನೆರಳಿನಲ್ಲಿ ಜೀವ ಉಸಿರಾಡುತ್ತಿದೆ.
ಆದರೆ ಇಂದು ಮಾನವನ ಅತಿಯಾದ ಸ್ವಾರ್ಥದ ನಡುವೆ, ಅದೇ ಪ್ರಕೃತಿ ಮೌನವಾಗಿ ನೋವಿನಲ್ಲಿ ಅಳುತ್ತಿದ್ದಾಳೆ. ಪ್ರಕೃತಿ ಉಳಿದರೆ ಪ್ರಪಂಚ ಉಳಿಯುತ್ತದೆ. ಭೂಮಿತಾಯಿಗೂ ನಮ್ಮ ಕರುಣೆ, ಪ್ರೀತಿ ಮತ್ತು ಕಾಳಜಿ ಬೇಕಿದೆ. ಅವಳಂತೆ ವಿಶಾಲ ಹೃದಯ, ಅವಳಂತೆ ಸಹೃದಯತೆ, ಬಂದವರಿಗೆಲ್ಲಾ ಆಸರೆಯಾಗುವ ಗುಣ ಇವೆಲ್ಲವನ್ನೂ ಅವಳು ನಮಗೆ ಕೊಟ್ಟಿದ್ದಾಳೆ. ಆದರೆ ನಾವು ಅವಳಿಗೆ ಏನು ಕೊಟ್ಟಿದ್ದೇವೆ?
ಪ್ರತಿ ವರ್ಷ ಜೂನ್ 5ರಂದು ಆಚರಿಸುವ ವಿಶ್ವ ಪರಿಸರ ದಿನ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ, ಅದು ಭೂಮಿಯ ಕಣ್ಣೀರನ್ನು ಒರೆಸುವ ಮಾನವೀಯ ಕರೆಯಾಗಿದೆ. ಒಮ್ಮೆ ಹಸಿರಿನಿಂದ ಕಂಗೊಳಿಸುತ್ತಿದ್ದ ಭೂಮಿಯು ಇಂದು ಹೊಗೆ ಮತ್ತು ಮಾಲಿನ್ಯದಿಂದ ಉಸಿರುಗಟ್ಟುತ್ತಿದ್ದಾಳೆ. ನದಿಗಳು ತಮ್ಮ ನೈಸರ್ಗಿಕ ಸಂಗೀತವನ್ನು ಕಳೆದುಕೊಂಡಿದೆ , ಮರಗಳು ಕಡಿದು ಬೀಳುವಾಗ ಪ್ರಕೃತಿಯ ಹೃದಯವೇ ತುಂಡಾಗುತ್ತಿದೆ , ಅವರ ಅಳುವು , ಗೋಳು ಕೇಳುವರ್ಯಾರು ! ಅರಿಯುವವರು ಯಾರು ?
ಮರ ಕಡಿದ ಮನುಜ ಮನೆ ಕಟ್ಟಿದ ,ಆದರೆ ತನ್ನ ನೆರಳನ್ನೇ ಕಳೆದುಕೊಂಡಿದ್ದು ತಿಳಿಯದಾದ. ಇಗಾ ನಗರೀಕರಣಕ್ಕೆ ದೂಷಿಸುತ್ತಿದ್ದಾನೆ. ಕೆರೆಗಳನ್ನೆಲ್ಲಾ ಮುಚ್ಚಿ , ನಗರ ಕಟ್ಟಿದವನು , ಮಳೆಗಾಲದಲ್ಲಿ ಊರೇ ಮುಳುಗಿದಾಗ , ಸರ್ಕಾರಕ್ಕೆ ಬೆರಳು ತೋರಿಸುತ್ತಾನೆ. ಬೇಸಿಗೆಯಲ್ಲಿ ನೀರಿಲ್ಲ ಎಂದು ಹಪಹಪಿಸುತ್ತಾನೆ.
ಇಂದು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅರಣ್ಯ ನಾಶ, ಪ್ಲಾಸ್ಟಿಕ್ ಮಾಲಿನ್ಯ, ವಾಯುಮಾಲಿನ್ಯ ಮತ್ತು ನೀರಿನ ಕೊರತೆ ಮಾನವಕುಲಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಒಮ್ಮೆ ಮಳೆಗಾಗಿ ಹಾಡುತ್ತಿದ್ದ ರೈತನ ನೆಲ ಇಂದು ಬಿರುಕು ಬಿಟ್ಟಿದೆ. ಬಿಸಿಲಿನ ತಾಪ ಹೆಚ್ಚುತ್ತಿದೆ, ಋತುಗಳ ಲಯ ತಪ್ಪುತ್ತಿದೆ. ಪ್ರಕೃತಿ ಕೋಪಗೊಂಡರೆ ಮಾನವನ ವಿಜ್ಞಾನವೂ ನಿರ್ಗತಿಕವಾಗುತ್ತದೆ ಎಂಬ ಸತ್ಯವನ್ನು ಇನ್ನೂ ಅರಿಯದ ಮುರ್ಖರು ಇನ್ನೂ ನಗರೀಕಣದ ಕೆಲಸದಲ್ಲಿ ಮುಳುಗಿದ್ದಾರೆ , ತಮ್ಮನ್ನೇ ಮುಳುಗಿಸಿಕೊಳ್ಳುತ್ತಿದ್ದಾರೆ.
ಪ್ರಕೃತಿಯ ಮೌನದ ಅಳಲು :
ಒಣಗಿದ ಮರದ ಕೊಂಬೆ : ‘ನನ್ನ ನೆರಳಲ್ಲಿ ವಿಶ್ರಾಂತಿ ಪಡೆದವನೇ, ಇಂದು ನನ್ನನ್ನೇ ಕಡಿದೆಯಲ್ಲ!’ ಎನ್ನುತಿದೆ.
ಮಲಿನಗೊಂಡ ನದಿ ಕೇಳಿತು: ‘ನನ್ನ ನೀರಿನಿಂದ ಬದುಕಿದವನೇ, ನನ್ನ ಉಸಿರನ್ನೇ ಏಕೆ ವಿಷಮಾಡಿದೆ.
ನಮ್ಮ ತಪ್ಪುಗಳ ಶಾಪ ಪರಿಸರಕ್ಕಲ್ಲ , ನಮಗೆ . ಸಾಮಾನ್ಯ ಮನೆ ಊಟ ಕೂಡ ವಿಷವಾಗಿದೆ , ಕಾರಣ ಬೆಳೆಯೋ ತರಕಾರಿಗಳ ಮಣ್ಣು ಕಲುಷಿತವಾಗಿರೋದರಿಂದ , ಕುಡಿಯೋ ನೀರು ವಿಷ ಮಾಡಿರೋ ನಾವು ಅದೇ ನೀರನ್ನು ಕುಡಿಯುತ್ತಿದ್ದೇವೆ.ಪ್ರಾಣಿಗಳ ವಾಸಸ್ಥಾನವೆಲ್ಲಾ ಕಡಿದು , ಕ್ರೂರಪ್ರಾಣಿಗಳೆಲ್ಲಾ ನಗರಕ್ಕೆ ಬಂದು ಬೆಳೆಹಾನಿ , ಸಾರ್ವಜನಿಕ ಸ್ಥಳ ಹಾನಿ , ಇಗೀಗ ಜೀವ ಹಾನಿ ಕೂಡ ಸರ್ವೇಸಾಮಾನ್ಯ . ಇದೆಲ್ಲಾ ಅದರ ಪ್ರತಿಫಲಗಳು.
ಪ್ಲಾಸ್ಟಿಕ್ ಇಂದು ಭೂಮಿಯ ಎದೆಯ ಮೇಲಿನ ಆಳವಾದ ಗಾಯ. ರಸ್ತೆಗಳಿಂದ ಸಮುದ್ರದವರೆಗೆ ಅದರ ಕಸ ಹರಡಿದೆ. ಮಾತನಾಡಲಾರದ ಪ್ರಾಣಿಗಳು ಅದನ್ನು ಆಹಾರವೆಂದು ಭಾವಿಸಿ ಜೀವ ಕಳೆದುಕೊಳ್ಳುತ್ತಿದೆ. ಪ್ರಕೃತಿಯ ಪ್ರತಿಯೊಂದು ನೋವು ಕೂಡ ಮನುಷ್ಯನ ಸಾವು, ನೋವುಗಳಾಗಿ ಭವಿಷ್ಯದಲ್ಲಿ ಕಾಡೋದಂತೂ ನಿಜ.ನಾವು ಎಸೆದ ವಿಷವೆಲ್ಲವನ್ನು , ನಮ್ಮನ್ನೇ ವಿಷಮಯ ಮಾಡುತಿದೆ ಎನ್ನುವ ಪರಿವು ನಮಗಿಲ್ಲ. ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. “ನೀರು ಉಳಿಸಿ” ಎಂಬುದು ಇಂದು ಕೇವಲ ಘೋಷಣೆಯಲ್ಲ , ಅದು ಇಗಾ ಬದುಕಿನ ಹೋರಾಟವಾಗಿ ಬದಲಾಗಿದೆ.
ಸಾಮಾಜಿಕ ಜವಾಬ್ದಾರಿ
ಪರಿಸರವನ್ನು ಉಳಿಸುವುದು ಸರ್ಕಾರದ ಕೆಲಸ ಮಾತ್ರವಲ್ಲ, ಅದು ಪ್ರತಿಯೊಂದು ಮನೆಯ ಜವಾಬ್ದಾರಿ, ಪ್ರತಿಯೊಬ್ಬರ ಕರ್ತವ್ಯ. ಒಂದು ಗಿಡ ನೆಡುವುದು ಅಂದರೆ ಕೇವಲ ಮರ ಬೆಳೆಸುವುದಲ್ಲ, ಒಂದು ಉಸಿರನ್ನು ಉಳಿಸುವುದು. ಹಸಿರು ಉಳಿದರೆ ಮಾತ್ರ ಮಾನವನ ಭವಿಷ್ಯ ಸುರಕ್ಷಿತವಾಗಿರುತ್ತದೆ.
“ಭೂಮಿ ನಮ್ಮ ಆಸ್ತಿ ಅಲ್ಲ, ಮುಂದಿನ ಪೀಳಿಗೆಯಿಂದ ಪಡೆದ ಸಾಲ. ಅದನ್ನು ಹಸಿರಾಗಿ ಮರಳಿ ಕೊಡುವುದು
ನಮ್ಮೆಲ್ಲರ ಜವಾಬ್ದಾರಿ.”
ಈ ವಿಶ್ವ ಪರಿಸರ ದಿನದಂದು ನಾವು ಪ್ರತಿಜ್ಞೆ ಮಾಡೋಣ
ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡೋಣ, ನೀರನ್ನು ಉಳಿಸೋಣ, ಮರಗಳನ್ನು ಬೆಳೆಸೋಣ.ಪ್ರಕೃತಿಯನ್ನು ಪ್ರೀತಿಸೋಣ.ಯಾಕೆಂದರೆ ಪ್ರಕೃತಿ ಖುಷಿಯಾಗಿದ್ದರೆ ಈ ಭೂಮಿ ಸಮೃದ್ಧಿಯಾಗಿ ಸ್ವರ್ಗವಾಗುತ್ತದೆ, ಪ್ರಕೃತಿ ಅತ್ತರೆ ನಾವಿಲ್ಲಿ ಪ್ರತಿಯೊಬ್ಬರು ಅದರ ಶಾಪಕ್ಕೆ ತುತ್ತಾಗುವುದರಲ್ಲಿ ಸಂದೇಹವಿಲ್ಲ. ಹಸಿರು ಉಳಿಸಿದರೆ, ನಮ್ಮ ಸುಂದರ ನಾಳೆಯನ್ನು ಸುರಕ್ಷಿತವಾಗಿ ಕಟ್ಟಿದಂತೆ.
ಅರ್ಚನಾ .ರಾಮಕೃಷ್ಣ
ಕುಂದಾಪುರ

