ಕುಂದಾಪುರ: ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲೆಗಳು ಹಾಗೂ ನಕಲಿ ಪಾನ್ ಕಾರ್ಡ್‌ಗಳನ್ನು ಸೃಷ್ಟಿಸಿ, ಉಪನೋಂದಣಾಧಿಕಾರಿಗಳ ಕಚೇರಿಯಲ್ಲೇ ಖೋಟಾ ಸಹಿ ಹಾಕಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ವಂಚನೆಯಿಂದ ನೊಂದಣಿ ಮಾಡಿಕೊಂಡಿರುವ ಆಘಾತಕಾರಿ ಹಗರಣವೊಂದು ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪದ ಅಪರಾಧ ಮೊಕದ್ದಮೆ ದಾಖಲಾಗಿದೆ. ಮುಂಬೈನ ದಹಿಸರ್ (ಪಶ್ಚಿಮ) ನಿವಾಸಿ ಸುನೀಲ್ ದೇವ ಪೈ (57) ಎಂಬುವರು ನೀಡಿದ ಅಧಿಕೃತ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ:
ದೂರುದಾರರಾದ ಸುನೀಲ್ ದೇವ ಪೈ ಅವರ ಅಜ್ಜ ಕೃಷ್ಣರಾಯ ಪೈ ಅವರು 1968 ರಲ್ಲಿ ಕುಂದಾಪುರ ಕಸಬಾ ಗ್ರಾಮದ ಸರ್ವೆ ನಂಬರ್ 115-2ಎ, 115/2ಸಿ, 111/13, 111/9ಎ ಮತ್ತು 111/9ಸಿ ವ್ಯಾಪ್ತಿಯ ವಿವಿಧ ಆಸ್ತಿಗಳನ್ನು ಕ್ರಯಪತ್ರದ ಮೂಲಕ ಖರೀದಿಸಿ ಅನುಭವಿಸಿಕೊಂಡು ಬಂದಿದ್ದರು. 1978 ರಲ್ಲಿ ಅಜ್ಜ ಮೃತಪಟ್ಟ ಬಳಿಕ, ಈ ಆಸ್ತಿಗಳು 2015-16 ರ ಮ್ಯುಟೇಶನ್ ಆದೇಶದಂತೆ ಸುನೀಲ್ ಅವರ ತಂದೆಯಾದ ಯು. ದೇವರಾಯ ಪೈ ಹಾಗೂ ಇತರೆ ವಾರಸುದಾರರ ಹೆಸರಿಗೆ ತಲ್ಬೀಲುಗೊಂಡಿದ್ದವು. ತಂದೆ ದೇವರಾಯ ಪೈ ಅವರು 2014 ರ ನವೆಂಬರ್ 10 ರಂದು ಮುಂಬೈನಲ್ಲಿ ನಿಧನರಾಗಿದ್ದರು.

