ಕುಂದಾಪುರ : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುವ ಸಲುವಾಗಿ ‘ವಿಧಿಕ್ತ – 2024’ ಅಂತರ್ ತರಗತಿ ಸ್ಪರ್ಧೆ ನಡೆಯಿತು. ಮೂಟ್ ಕೋರ್ಟ್ ಮಾದರಿ ಆಧಾರಿತ ಈ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ನ್ಯಾಯದೇವತೆಯ ಕಣ್ಣಿಗೆ ಕಟ್ಟಿದ ಕಪ್ಪು ಪಟ್ಟಿಯನ್ನು ಬಿಡಿಸುವ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭ ಕಾನೂನಿನ ಅರಿವು ಕೇವಲ ನ್ಯಾಯಾಲಯಕ್ಕೆ ಮಾತ್ರ ಸೀಮಿತವಲ್ಲದೆ, ಅದು ದೈನಂದಿನ ಪರಿಸ್ಥಿತಿಗಳಲ್ಲಿಯೂ ಅನ್ವಯವಾಗುತ್ತದೆ ಮತ್ತು ವಿದ್ಯಾರ್ಥಿಗಳು ಜೀವನಕ್ಕೆ ಅಮೂಲ್ಯವಾದ ಮತ್ತು ಅಳಿಸಲಾಗದ ಪಾಠಗಳನ್ನು ಕಲಿಯುವಾಗ ಕಾನೂನು ಶಿಕ್ಷಣದ ಅರಿವು ಮಹತ್ವದ್ದಾಗಿರುತ್ತದೆ ಎಂದು ಹೇಳಿದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ವಿ. ಭಟ್ ಪ್ರಾಸ್ತಾವಿಸಿ, ಸಂಯೋಜಕ ಶ್ರೀ ಸತೀಶ್ ಶೆಟ್ಟಿ ಹೆಸ್ಕತ್ತೂರು ಸ್ವಾಗತಿಸಿ, ವಿದ್ಯಾರ್ಥಿ ಆದಿತ್ಯ ಪ್ರಾರ್ಥಿಸಿ, ಸಂಯೋಜಕ ಶ್ರೀ ಸುಹಾಸ್ ಜೆ.ಜಿ. ವಂದಿಸಿ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಯೋಗೀಶ್ ಶ್ಯಾನುಭೋಗ್ ನಿರೂಪಿಸಿದರು.