ಉಡುಪಿ : ಇಲ್ಲಿನ ನೇಜಾರು ಗ್ರಾಮದಲ್ಲಿ ಒಂದೇ ಮನೆಯ ನಾಲ್ವರನ್ನು ಚೂರಿಯಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ ಆರೋಪಿ ಬೆಳಗಾವಿಯ ಪ್ರವೀಣ್ ಚೌಗುಲೆಗೆ ಉಡುಪಿ ಜಿಲ್ಲಾ ನ್ಯಾಯಾಲಯ 2ನೇ ಬಾರಿ ಜಾಮೀನು ನಿರಾಕರಿಸಿದೆ. ಕಳೆದ ತಿಂಗಳು ಚೌಗುಲೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಮತ್ತೇ ಮಾ.13ರಂದು ಎರಡನೇ ಬಾರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಶನಿವಾರ ಈ ಅರ್ಜಿಗೆ ವಿಶೇಷ ಸರ್ಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಆಕ್ಷೇಪಣೆ ಸಲ್ಲಿಸಿದರು. ಆರೋಪಿ ಪರ ವಕೀಲ ರಾಜೇಶ್ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರ ಮಧ್ಯೆ ವಾದ ಪ್ರತಿವಾದ ನಡೆಯಿತು. ಆರೋಪಿ ಮೇಲಿನ ಆರೋಪಗಳು ಎಫ್‌ಎಸ್‌ಎಲ್ ವರದಿ ಸೇರಿದಂತೆ ಇನ್ನಿತರ ಸಾಕ್ಷಿಗಳಿಂದ ಮೇಲ್ನೋಟಕ್ಕೆ ಸಾಬೀತಾಗಿವೆ. ಇದು ಗಂಭೀರ ಪ್ರಕರಣವಾದ್ದರಿಂದ ಆರೋಪಿಗೆ ಜಾಮೀನು ನೀಡಿದರೆ ಆತ ಸಾಕ್ಷಿಗಳಿಗೆ ಹೆದರಿಸುವ ಸಾಧ್ಯತೆ ಇದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರು ವಾದಿಸಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ ಆರೋಪಿಗೆ ಜಾಮೀನು ನಿರಾಕರಿಸಿದರು. ಆರೋಪಿ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ