ಬೆಂಗಳೂರು : ರಾಜ್ಯ ಸರ್ಕಾರ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ದೆಹಲಿ ಚಲೋ ನಡೆಸಿದ ಕಾಂಗ್ರೆಸ್ಸಿಗರಿಗೆ ಮತದಾರರು ಲೋಕಸಭಾ ಚುನಾವಣೆಯಲ್ಲಿ ಮನೆಗೆ ಕಳಿಸುವ ಮೂಲಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ
ಬುಧವಾರ ವಿಧಾನಸೌಧದ ಆವರಣದಲ್ಲಿನ ಗಾಂಧಿ ಪ್ರತಿಮೆ ಮುಂದೆ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವೇಳೆ ಬರಗಾಲ ಪರಿಸ್ಥಿತಿ ಎದುರಾಗಿದ್ದರೂ ಸಮರ್ಪಕವಾಗಿ ವಿದ್ಯುತ್ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರವು ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ, ಬರಗಾಲ ಪರಿಸ್ಥಿತಿ ಇದ್ದರೂ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ಸರ್ಕಾರವು ತನ್ನ ಖಜಾನೆಯನ್ನು ಖಾಲಿಮಾಡಿಕೊಂಡಿದೆ. ದೆಹಲಿ ಚಲೋ ಮೂಲಕ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಸಮರ್ಥ ಆಡಳಿತದ ವಿರುದ್ಧ ಮುಂದಿನ ದಿನಗಳಲ್ಲಿ ಜಿಲ್ಲೆಗಳಲ್ಲೂ ಹೋರಾಟ ಮಾಡುವುದಾಗಿ ಇದೇ ವೇಳೆ ಅವರು ಎಚ್ಚರಿಸಿದರು. ರಾಜ್ಯದ ಜನತೆಗೆ ಮತ್ತು ರೈತರ ಪಾಲಿಗೆ ರಾಜ್ಯ ಸರ್ಕಾರವು ಇದ್ದೂ ಸತ್ತಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು