ಕುಂದಾಪುರ : ಪರೀಕ್ಷೆಯ ಓದಿಗಿಂತ ಸಾಮಾನ್ಯ ಓದು ವಿದ್ಯಾರ್ಥಿಯ ಆಲೋಚನೆಯನ್ನು ಭಿನ್ನವಾಗಿ ರೂಪಿಸುತ್ತದೆ, ಗೃಹಿಕೆ, ಚಿಂತನೆಗಳನ್ನು ಹೆಚ್ಚಿಸುತ್ತದೆ, ಸೃಜನಶೀಲತೆಯನ್ನು ಹುಟ್ಟಿಸುತ್ತದೆ. ವಿದ್ಯಾರ್ಥಿಗಳ ಆದ್ಯತೆ ಬದಲಾಗಬೇಕು, ಓದು ಉದ್ಯೋಗ ಅಥವಾ ಹಣಗಳಿಸುವಿಕೆಯಲ್ಲ, ಅದು ಹೊಸ ಯೋಜನೆಗಳ ಹುಟ್ಟಿಗೆ ಪರಿಪೂರ್ಣ ವ್ಯಕ್ತಿತ್ವಕ್ಕೆ ಓದುವ ಹವ್ಯಾಸ ಮುಖ್ಯ ಎಂದು ಎಸ್.ಎಮ್.ಎಸ್. ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೊ| ಸುಶೀಲಾ ರೈ ಹೇಳಿದರು.
ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ವ್ಯವಹಾರಡಳಿತ ವಿದ್ಯಾಲಯದ ಪ್ರಾಧ್ಯಾಪಕ ಡಾ| ಸುಧೀರ್ ರಾಜ್ ವಿದ್ಯಾರ್ಥಿಗಳು ಅರ್ಥಪೂರ್ಣವಾದ ಕನಸನ್ನು ಕಾಣುವಂತಾಗಬೇಕು. ಈ ತಂತ್ರಜ್ಞಾನದ ಯುಗದಲ್ಲಿ ಧನಾತ್ಮಕವಾಗಿ ಯೋಚಿಸಿ, ದೂರದೃಷ್ಟಿತ್ವವನ್ನು ಬೆಳೆಸಿಕೊಳ್ಳುವ ಮುಖೇನ ಪರಿಪೂರ್ಣ ಜೀವನವನ್ನು ರೂಪಿಸಿಕೊಳ್ಳಿ ಎಂದರು.
ಈ ಸಂದರ್ಭ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬಿ.ಎಮ್. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ವಾರ್ಷಿಕ ವರದಿ ವಾಚಿಸಿದರು. ಉಪ–ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ವಾಣಿಜ್ಯ ಪ್ರಾಧ್ಯಾಪಕರಾದ ಶ್ರೀ ಸುಧೀರ್ ಕುಮಾರ್ ಹಾಗೂ ಶ್ರೀಮತಿ ಜೋಸ್ಲಿನ್ ಆರ್. ಅಲ್ಮೇಡಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ವಿಶೇಷ ಬಹುಮಾನಿತರ ಪಟ್ಟಿ ವಾಚಿಸಿದರು. ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿ ಶ್ರೀ ಹರೀಶ್ ಕಾಂಚನ್ ವಂದಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ವಿ. ಭಟ್ ನಿರೂಪಿಸಿದರು. ಈ ಸಂದರ್ಭ ಪಿ.ಹೆಚ್ಡಿ. ಪದವಿ ಪಡೆದ ಕಾಲೇಜಿನ ಉಪ–ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿಯವರನ್ನು ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು.