ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮತ್ತು ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ 1: ಬೋರ್‌ವೆಲ್ ನೀರು ಸಿಕ್ಕಿದ್ದಕ್ಕೆ ಅಸೂಯೆ – ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನ
ಕಡಬ ತಾಲ್ಲೂಕಿನ ಐತ್ತೂರು ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಸಂತ್ರಸ್ತೆ ಬೇಬಿ, ಕೆ.ಎಸ್. (35) ಎಂಬವರು ತಮ್ಮ ಜಾಗದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು, ಅಲ್ಲಿ ಕೊರೆಸಿದ ಬೋರ್‌ವೆಲ್‌ನಲ್ಲಿ ನೀರು ಲಭಿಸಿತ್ತು. ಈ ವಿಚಾರದಲ್ಲಿ ಅಸೂಯೆಗೊಂಡ ಅವರ ಪತಿಯ ಸಹೋದರ ಕುಸುಮಾಧರ (37) ಎಂಬಾತನು, ಮೇ 6ರಂದು ಬೆಳಿಗ್ಗೆ ಪೆಟ್ರೋಲ್ ಕ್ಯಾನ್‌ನೊಂದಿಗೆ ಬಂದು ಬೇಬಿ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ.
ಸಂತ್ರಸ್ತೆಯು ಜೋರಾಗಿ ಕೂಗಿಕೊಂಡಾಗ ನೆರೆಹೊರೆಯವರು ಧಾವಿಸಿ ಬಂದಿದ್ದಾರೆ. ತಕ್ಷಣವೇ ಆರೋಪಿಯು ಪೆಟ್ರೋಲ್ ಕ್ಯಾನ್ ಹಾಗೂ ಬೆಂಕಿ ಪೊಟ್ಟಣವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 57/2026, ಕಲಂ: 109(1) BNS-2023 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
12 ವರ್ಷಗಳ ಕಾಲ ವಿದೇಶದಲ್ಲಿ ಅಡಗಿದ್ದ ಆರೋಪಿ ಮುಂಬೈ ವಿಮಾನ ನಿಲ್ದಾಣದಲ್ಲಿ ಸೆರೆ
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಹಳೆಯ ಪ್ರಕರಣವೊಂದರ ಆರೋಪಿಯನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. 2014ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದ (ಅಕ್ರ: 260/2014, ಕಲಂ: 306 IPC) ಆರೋಪಿ, ಕರಿಯಂಗಳ ನಿವಾಸಿ ದುನಿಯಾ ಶರೀಫ್ @ ಮಹಮ್ಮದ್ ಶರೀಫ್ (52) ಎಂಬಾತನು ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ಪರಾರಿಯಾಗಿದ್ದನು.
ಮೇ 5ರಂದು ಈತನು ವಿದೇಶದಿಂದ ಮುಂಬೈಗೆ ಮರಳುತ್ತಿದ್ದ ಮಾಹಿತಿಯನ್ನಾಧರಿಸಿ, ಬಂಟ್ವಾಳ ಗ್ರಾಮಾಂತರ ಪೊಲೀಸರು ಮುಂಬೈನ ಸಹರಾ ಠಾಣೆಯ ಸಹಕಾರದೊಂದಿಗೆ ಆತನನ್ನು ದಸ್ತಗಿರಿ ಮಾಡಿದ್ದಾರೆ. ಮೇ 6ರಂದು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

