Home » ದೇವತಾನುಗ್ರಹ ಮತ್ತು ಸಂಘಟನಾ ಶಕ್ತಿಯ ಸಮ್ಮಿಲನದಿಂದ ಕಾರ್ಯ ಸಾಧನೆ ಸಾಧ್ಯ
 

ದೇವತಾನುಗ್ರಹ ಮತ್ತು ಸಂಘಟನಾ ಶಕ್ತಿಯ ಸಮ್ಮಿಲನದಿಂದ ಕಾರ್ಯ ಸಾಧನೆ ಸಾಧ್ಯ

ಡಾ. ನಿ.ಬೀ. ವಿಜಯ ಬಲ್ಲಾಳ್

by Kundapur Xpress
Spread the love

ಅಂಬಲಪಾಡಿ :ನವ ವಿಧ ಭಕ್ತಿಗಳಲ್ಲಿ ಭಜನೆಗೆ ಬಹಳ ಪ್ರಾಮುಖ್ಯತೆ ಇದೆ. ಕಳೆದ 64 ವರ್ಷಗಳಿಂದ ವಾರದ ಭಜನೆ, ಮಂಗಲೋತ್ಸವ ಸಹಿತ ವಿವಿಧ ಧಾರ್ಮಿಕ ಆಚರಣೆಗಳ ಜೊತೆಗೆ ನಿರಂತರ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ ಇದರ ಕಾರ್ಯವೈಖರಿ ಅನುಕರಣೀಯ. ದೇವತಾನುಗ್ರಹ ಮತ್ತು ಸಂಘಟನಾ ಶಕ್ತಿಯ ಸಮ್ಮಿಲನದಿಂದ ನಿಯೋಜಿತ ಕಾರ್ಯ ಸಾಧನೆಗಳ ಪರಿಪೂರ್ಣತೆ ಸುಲಭ ಸಾಧ್ಯ ಎಂದು ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.

ಅವರು ಅಂಬಲಪಾಡಿ ಬಿಲ್ಲವ ಸೇವಾ ಸಂಘ(ರಿ.) ಹಾಗೂ ಶ್ರೀ ವಿಠೋಬ ಭಜನಾ ಮಂದಿರದ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಶ್ರೀ ನಾರಾಯಣ ಗುರು ಸಮುದಾಯ ಭವನದ 2ನೇ ಅಂತಸ್ತಿನ ಸಭಾಂಗಣ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆಯ ಲೋಕಾರ್ಪಣೆಗೈದು ಆಶೀರ್ವಚನದ ಮಾತುಗಳನ್ನಾಡಿದರು.

‘ಭಜಕನು ಮಲಗಿ ಹಾಡಿದರೆ ಭಗವಂತನು ಕುಳಿತು ಕೇಳುತ್ತಾನೆ, ಕುಳಿತು ಹಾಡಿದರೆ ನಿಲ್ಲುತ್ತಾನೆ, ನಿಂತು ಹಾಡಿದರೆ ನಲಿಯುತ್ತಾನೆ, ನಲಿದು ಹಾಡಿದರೆ ಒಲಿಯುತ್ತಾನೆ’ ಎಂಬ ಭಜನೆಯ ಸಾಲುಗಳನ್ನು ವಿಶ್ಲೇಷಿಸಿದ ಧರ್ಮದರ್ಶಿಗಳು, ‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂಬಂತೆ ಶ್ರೀ ವಿಠೋಬ ಭಜನಾ ಮಂದಿರದಲ್ಲಿ ಎಲ್ಲರ ಒಗ್ಗೂಡುವಿಕೆಯಿಂದ ಮಾದರಿ ಭಜನಾ ತಂಡದ ಜೊತೆಗೆ ವಿದ್ಯಾರ್ಥಿನಿಯರನ್ನೊಳಗೊಂಡ ಮಹಿಳಾ ಕುಣಿತದ ಭಜನಾ ತಂಡ ರೂಪುಗೊಂಡಿರುವುದು ಶ್ಲಾಘನೀಯ ಎಂದರು.

ದೀನ ದಲಿತೋದ್ಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ‘ಸಂಘಟನೆಯಿಂದ ಬಲಯುತಾರಾಗಿರಿ, ವಿದ್ಯಾರ್ಜನೆಯಿಂದ ಸ್ವತಂತ್ರರಾಗಿರಿ’ ಎಂಬ ದಿವ್ಯ ವಾಣಿಯ ಅನುಸಾರ ಸರಕಾರದ ಅನುದಾನ ಮತ್ತು ಸಂಘದ ಸದಸ್ಯರು ಹಾಗೂ ದಾನಿಗಳ ನೆರವಿನಿಂದ ನಿರ್ಮಾಣಗೊಂಡಿರುವ ಶ್ರೀ ನಾರಾಯಣ ಗುರು ಸಮುದಾಯ ಭವನದ 2ನೇ ಅಂತಸ್ತಿನ ಸಭಾಂಗಣ ಸಮಾಜಕ್ಕೆ ಉಪಯುಕ್ತವಾಗಲಿ. ಸಂಘದ ಮುoದಿನ ಎಲ್ಲ ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿಯ ಕಾರ್ಯ ಯೋಜನೆಗಳು ದೇವರ ಅನುಗ್ರಹದಿಂದ ಯಶಸ್ಸನ್ನು ಕಾಣುವoತಾಗಲಿ ಎಂದು ಡಾ! ನಿ.ಬೀ. ವಿಜಯ ಬಲ್ಲಾಳ್ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮೂರು ಮಂದಿ ಸಾಧಕರುಗಳಾದ ‘ನಿಡಂಬೂರು ಬೀಡು ಶ್ರೀ’ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಪಠೇಲರ ಮನೆ ಎ. ಜಯಕರ ಶೆಟ್ಟಿ ಅಂಬಲಪಾಡಿ ಇವರನ್ನು ‘ಶಿಕ್ಷಕ ರತ್ನ’ ಪ್ರಶಸ್ತಿಯನ್ನಿತ್ತು, ಖ್ಯಾತ ಸಾಹಿತಿ, ನಾಟಕಕಾರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ್ ಕಿದಿಯೂರು ಇವರನ್ನು ‘ಸಾಹಿತ್ಯ ರತ್ನ’ ಪ್ರಶಸ್ತಿಯನ್ನಿತ್ತು, ಖ್ಯಾತ ಸಮಾಜ ಸೇವಕ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲ್ ಸಿ. ಬಂಗೇರ ಪಂದುಬೆಟ್ಟು ಇವರನ್ನು ‘ಸಮಾಜ ಸೇವಾ ರತ್ನ’ ಪ್ರಶಸ್ತಿಯನ್ನಿತ್ತು ಧರ್ಮದರ್ಶಿಗಳು ಸನ್ಮಾನಿಸಿದರು.

ಸನ್ಮಾನಿತರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಸಂಘವು ನಡೆದು ಬಂದ ದಾರಿ ಹಾಗೂ ಪ್ರಗತಿಯನ್ನು ಶ್ಲಾಘಿಸಿ, ಸಾಧನೆಯನ್ನು ಗುರುತಿಸಿ ಗೌರವಿಸಿದಾಗ, ಸನ್ಮಾನಿತರ ಜವಾಬ್ದಾರಿ ಹೆಚ್ಚುವ ಜೊತೆಗೆ ನಿಗದಿತ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಸಾಧನೆಗೈಯಲು ಪ್ರೇರಣೆ ದೊರೆತಂತಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಮಾತನಾಡಿ, ಸಮಾಜದ ಹಿರಿಯರ ತ್ಯಾಗ, ದೂರದರ್ಶಿತ್ವದ ಚಿಂತನೆ ಹಾಗೂ ಸಂಘದ ಸರ್ವ ಸದಸ್ಯರ ಸಂಘಟಿತ ಶ್ರಮ ಮತ್ತು ಸಮರ್ಪಣಾಭಾವದ ಸೇವೆಯಿಂದ ಸಂಘದ ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಸುಸಜ್ಜಿತ ಸಮುದಾಯ ಭವನ ನಿರ್ಮಾಣದ ಯೋಜನೆಯು ಸರಕಾರ ಮತ್ತು ಧಾನಿಗಳ ನೆರವಿನಿಂದ ಹಂತ ಹಂತವಾಗಿ ವೇಗ ಪಡೆದು ಸoಪೂರ್ಣಗೊಂಡಿರುವ ಸಂತೃಪ್ತಿಯ ಕ್ಷಣದಲ್ಲಿ ಸಹಕರಿಸಿದ ಎಲ್ಲರಿಗೂ ಸಂಘವು ಅಭಾರಿಯಾಗಿದೆ. ಸಂಘದ ಮುoದಿನ ಎಲ್ಲ ಕಾರ್ಯ ಯೋಜನೆಗಳ ಯಶಸ್ವಿಗೆ ಎಲ್ಲರ ಸಹಕಾರ, ಪ್ರೇರಣೆ ಅತೀ ಅಗತ್ಯ ಎಂದರು.

ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಯೋಗೀಶ್ ಶೆಟ್ಟಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶಿವದಾಸ್ ಪಿ., ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ ಎ., ಜತೆ ಕಾರ್ಯದರ್ಶಿ ಮಹೇಂದ್ರ ಕೋಟ್ಯಾನ್, ಮಹಿಳಾ ಘಟಕದ ಗೌರವ ಸಂಚಾಲಕಿ ವಿಜಯಾ ಜಿ. ಬಂಗೇರ, ಸಂಚಾಲಕಿ ಗೋದಾವರಿ ಎಮ್. ಸುವರ್ಣ, ಭಜನಾ ಸಂಚಾಲಕ ಕೆ. ಮಂಜಪ್ಪ ಸುವರ್ಣ, ಸಂಘದ ಆಡಳಿತ ಸಮಿತಿ ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು, ಸಮಿತಿ ಸದಸ್ಯರು, ಸಂಘದ ಸದಸ್ಯರು ಹಾಗೂ ಗ್ರಾಮಸ್ಥಗರು ಉಪಸ್ಥಿತರಿದ್ದರು. ಸಂಘದ ಸದಸ್ಯರು, ಮಹಿಳಾ ಘಟಕ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರಗಿತು.

   

Related Articles

error: Content is protected !!