ಕಾರ್ಕಳ :ಪ್ರಧಾನಿ ನರೇಂದ್ರ ಮೋದಿ ಆಡಳಿತದ 9 ವರ್ಷಗಳ ಸಾಧನೆಗಳ ಪ್ರಚಾರದ ಅಂಗವಾಗಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮತ್ತು ಮಹಾಸಂಪರ್ಕ ಅಭಿಯಾನದ ಕರಪತ್ರ ಬಿಡುಗಡೆ ಕಾರ್ಯಕ್ರಮವು ಬಿಜೆಪಿ ಕಾರ್ಕಳ ಮಂಡಲಾಧ್ಯಕ್ಷ ಮಹಾವೀರ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಕಾರ್ಕಳ ಮಂಡಲ ಕಛೇರಿಯಲ್ಲಿ ನಡೆಯಿತು.
ಅಭಿಯಾನದ ಕಾರ್ಕಳ ಮಂಡಲ ಉಸ್ತುವಾರಿಗಾಳಾದ ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ವಿಜಯಕುಮಾರ್ ಉದ್ಯಾವರ ಮತ್ತು ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಮಾತನಾಡಿ, ಪಕ್ಷದ ಸೂಚನೆಯಂತೆ ಮಂಡಲ ಮಟ್ಟದಲ್ಲಿ ಹಿರಿಯ ಬಿಜೆಪಿಗರ ಸಮಾವೇಶ, ವ್ಯಾಪಾರಸ್ಥರ ಸಮಾವೇಶ, ಮಂಡಲ ಕಾರ್ಯಕಾರಿಣಿ ಸಭೆ, ಕೇಂದ್ರ ಸರಕಾರದ ಸಾಧನೆ ಪ್ರಚುರಪಡಿಸುವ ಕರಪತ್ರ ವಿತರಣೆ, ಮನೆ ಮನೆ ಬೇಟಿ ಹಾಗೂ ಮಂಡಲ ವ್ಯಾಪ್ತಿಯ 100 ಮಂದಿ ಪ್ರಮುಖರು ಮತ್ತು ವೃತ್ತಿಪರರ ತಂಡ ರಚನೆ, ಪ್ರತೀ ಬೂತ್ ವ್ಯಾಪ್ತಿಯಲ್ಲಿ 100 ಮಂದಿ ಸಕ್ರಿಯ ಕಾರ್ಯಕರ್ತರ ತಂಡ ರಚನೆ, ಮಂಡಲ ಪದಾಧಿಕಾರಿಗಳ ಸೌಹಾರ್ದ ಕೂಟ ಆಯೋಜನೆ ಸಹಿತ ಸೋಷಿಯಲ್ ಮೀಡಿಯಾ ತಂಡಗಳನ್ನು ಸಕ್ರಿಯಗೊಳಿಸುವುದು ಇವೇ ಮುಂತಾದ ಪ್ರಮುಖ ಕಾರ್ಯ ಚಟುವಟಿಕೆಗಳನ್ನು ಸಂಘಟಿತ ಪ್ರಯತ್ನದ ಮೂಲಕ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕು ಎಂದರು.
ಮುಂಬರಲಿರುವ ತಾ.ಪಂ., ಜಿ.ಪಂ. ಮತ್ತು ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರದ ಜನಪರ ಯೋಜನೆಗಳು ಮತ್ತು ರಾಜ್ಯ ಸರಕಾರದ ಗ್ಯಾರಂಟಿಗಳ ವೈಫಲ್ಯ ಹಾಗೂ ದುರಾಡಳಿತದ ಬಗ್ಗೆ ಜನತೆಗೆ ಮನಮುಟ್ಟುವಂತೆ ವಿವರಿಸಿ, ಮುಂದಿನ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ದೊಡ್ಡ ಅಂತರದ ಗೆಲುವಿಗೆ ಬದ್ಧತೆಯಿಂದ ಶ್ರಮಿಸುವಂತೆ ಕೋರಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 9 ವರ್ಷಗಳ ಸಾಧನೆಗಳ ವಿವರಗಳನ್ನೊಳಗೊಂಡಿರುವ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಮಡಿವಾಳ, ಮಂಡಲ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಶಿವಪುರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ನಾಯ್ಕ್, ಜಯರಾಮ್ ಸಾಲ್ಯಾನ್, ಹಿರಿಯ ಕಾರ್ಯಕರ್ತ ರಾಮಚಂದ್ರ ನಾಯಕ್, ಮಂಡಲ ವಕ್ತಾರ ಹರೀಶ್ ಶೆಣೈ, ಕ್ಯಾಂಪ್ಕೊ ನಿರ್ದೇಶಕ ದಯಾನಂದ ಹೆಗ್ಡೆ, ತಾಲೂಕು ಕಾರ್ಯದರ್ಶಿ ಶಂಕರ್ ಕುಂದರ್, ನಗರಾಧ್ಯಕ್ಷ ರವೀಂದ್ರ ಮೊಯ್ಲಿ, ಕಾರ್ಯದರ್ಶಿ ನಿರಂಜನ್ ಜೈನ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಪ್ರಮುಖರಾದ ರವೀಂದ್ರ ಶೆಟ್ಟಿ ಮುಂಡ್ಕೂರು, ಉದಯ ಎಸ್. ಕೋಟ್ಯಾನ್, ಸುಮಾ ಕೇಶವ, ಕರುಣಾಕರ ಶೆಟ್ಟಿ ಬೋಳ, ಸಂತೋಷ್ ಶೆಟ್ಟಿ ಹಿರ್ಗಾನ, ಪುರಸಭಾ ಸದಸ್ಯರು, ಮಂಡಲ ಪದಾಧಿಕಾರಿಗಳು, ಗ್ರಾಮ ಸಮಿತಿಗಳ ಅಧ್ಯಕ್ಷರು, ಮಹಾ ಶಕ್ತಿಕೇಂದ್ರ, ಮೋರ್ಚಾ ಮತ್ತು ಪ್ರಕೋಷ್ಠಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.