Home » ಸ್ಪೀಕರ್ ಸ್ಥಾನದ ಅಧಿಕಾರ ದುರ್ಬಳಕೆ
 

ಸ್ಪೀಕರ್ ಸ್ಥಾನದ ಅಧಿಕಾರ ದುರ್ಬಳಕೆ

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್

by Kundapur Xpress
Spread the love

ಕುಂದಾಪುರ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಾಯೋಜಿತ ಹೊರ ರಾಜ್ಯಗಳ ಕಳಂಕಿತ ರಾಜಕಾರಿಣಿಗಳ ಸಮಾವೇಶಕ್ಕೆ ರಾಜ್ಯದ ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ ಶಿಷ್ಟಾಚಾರ ಉಲ್ಲಂಘಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿದ ಬಿಜೆಪಿಯ 10 ಶಾಸಕರನ್ನು ಸದನದಿಂದ ಅಮಾನತುಗೊಳಿಸುವ ಮೂಲಕ ಕಾಂಗ್ರೆಸ್ ವಿಪಕ್ಷಗಳನ್ನು ಹತ್ತಿಕ್ಕಲು ಸ್ಪೀಕರ್ ಸ್ಥಾನದ ಅಧಿಕಾರವನ್ನು ದುರ್ಬಳಕೆ ಮಾಡಿರುವುದು ಸಾಬೀತಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ತಮ್ಮ ಹುಳುಕನ್ನು ಮುಚ್ಚಿಹಾಕಲು ಬಿಜೆಪಿ ಶಾಸಕರನ್ನು ಅಮಾನತುಗೊಳಿಸುವ ಜೊತೆಗೆ ವಿಪಕ್ಷ ಶಾಸಕರ ಹಕ್ಕನ್ನು ಮೊಟಕುಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸದನದಲ್ಲಿ ಏಕಪಕ್ಷೀಯವಾಗಿ, ಸರ್ವಾಧಿಕಾರಿ ಧೋರಣೆ ತೋರ್ಪಡಿಸುತ್ತಿದ್ದು, ಸ್ಪೀಕರ್ ಕಾಂಗ್ರೆಸ್ಸಿನ ಕೈಗೊಂಬೆಯಂತೆ ವರ್ತಿಸುತ್ತಿರುವುದು ಸ್ಪೀಕರ್ ಸದನವನ್ನು ನಡೆಸಿಕೊಳ್ಳುವ ರೀತಿಯಿಂದ ಸ್ಪಷ್ಟವಾಗಿದೆ.

ಈ ಹಿಂದೆ ಸದನದಲ್ಲಿ ಕಾಂಗ್ರೆಸ್ ಶಾಸಕರು ಯಾವ ರೀತಿ ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದರು ಎಂಬುದನ್ನು ಕಾಂಗ್ರೆಸಿಗರು ತಿಳಿದುಕೊಳ್ಳುವುದು ಉತ್ತಮ. ಸದನದಲ್ಲಿ ಮಸೂದೆಯ ಪ್ರತಿಗಳನ್ನು ಹರಿದು ಹಾಕಿ, ಸ್ಪೀಕರ್ ಮೇಲೆ ದೈಹಿಕ ಹಲ್ಲೆ ನಡೆಸಿದ ಕರಾಳ ಇತಿಹಾಸ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗಿರುವ ಐದು ನಕಲಿ ಗ್ಯಾರಂಟಿಗಳನ್ನು ನುಡಿದಂತೆ ಯಥಾವತ್ತಾಗಿ ಜಾರಿಗೊಳಿಸಲು ವಿಫಲವಾಗಿರುವ ಜನ ವಿರೋಧಿ ಕಾಂಗ್ರೆಸ್ ಇದೀಗ ಸರಕಾರದ ವಿಪಕ್ಷವನ್ನು ಹತ್ತಿಕ್ಕುವ ಕಾರ್ಯದಲ್ಲಿ ನಿರತವಾಗಿರುವುದನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಯವಂಚಕ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ನಯನಾ ಗಣೇಶ್  ತಿಳಿಸಿದ್ದಾರೆ.

   

Related Articles

error: Content is protected !!