Home » ಕೃಷಿ ಸಚಿವ ರಾಜೀನಾಮೆ ನೀಡಲಿ
 

ಕೃಷಿ ಸಚಿವ ರಾಜೀನಾಮೆ ನೀಡಲಿ

: ಕುಯಿಲಾಡಿ

by Kundapur Xpress
Spread the love

ಕೃಷಿ ಸಚಿವ ರಾಜೀನಾಮೆ ನೀಡಲಿ

ಕಾಂಗ್ರೆಸ್ ಪಕ್ಷದ ನಕಲಿ ಗ್ಯಾರಂಟಿಗಳ ಮೂಲಕ ರಾಜ್ಯದ ಜನತೆಯ ದಾರಿ ತಪ್ಪಿಸಿ, ರಾಜ್ಯವನ್ನು ದಿವಾಳಿಯ ಅಂಚಿಗೆ ಕೊಂಡೊಯ್ಯಲು ಹರಸಾಹಸ ಪಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಲಂಚಾವತಾರ ಮೇಳೈಸಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಸರಕಾರ ತಕ್ಷಣ ಲಂಚಕೋರ ಕೃಷಿ ಸಚಿವ ಚೆಲುವರಾಯಸ್ವಾಮಿಯವರ ರಾಜೀನಾಮೆಯನ್ನು ಪಡೆದು, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹಿಸಿದ್ದಾರೆ.ಬಿಜೆಪಿ ಆಡಳಿತಾವಧಿಯಲ್ಲಿ ತುಂಬಿದ್ದ ಬೊಕ್ಕಸದ ಹಣದ ಜೊತೆಗೆ ದಲಿತರ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಟ್ಟ ರೂ.11,000 ಕೋಟಿ ಮೊತ್ತವನ್ನು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಗೆ ವಿನಿಯೋಗಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ ಯಾವುದೇ ಅಭಿವೃದ್ದಿ ಕೆಲಸ ಕಾರ್ಯಗಳಿಗೆ ಹಣ ಇಲ್ಲ ಎನ್ನುವ ಮೂಲಕ ರಾಜ್ಯವನ್ನು ಪರೋಕ್ಷವಾಗಿ ದಿವಾಳಿಯ ಅಂಚಿಗೆ ದೂಡಿರುವ ಜೊತೆಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ಅಡ್ದ ದಾರಿ ಹಿಡಿದಿರುವಂತೆ ಕಂಡುಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ವರ್ಗಾವಣೆ ಕಮಿಷನ್ ದಂಧೆ ರಾಜಾರೋಷವಾಗಿ ನಡೆಯುತ್ತಿರುವುದು ಜಗಜ್ಜಾಹೀರಾಗಿದೆ. ಪ್ರಾಯಶಃ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಪತ್ರಿಕಾ ಜಾಹೀರಾತಿನಲ್ಲಿ ನೀಡಿದ್ದ ಸ್ವಯಂ ಘೋಷಿತ ಕಮಿಷನ್ ದರದ ಪಟ್ಟಿಗೆ ರಾಜ್ಯ ಸರಕಾರ ಇದೀಗ ಚಾಲನೆ ನೀಡಿದಂತಿದೆ. ಇದಕ್ಕೆ ಪೂರಕವಾಗಿ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಪುಟದ ಕೃಷಿ ಸಚಿವ ಚೆಲುವರಾಯಸ್ವಾಮಿ 6ರಿಂದ 8 ಲಕ್ಷ ರೂಪಾಯಿಗಳ ಲಂಚದ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಂಡ್ಯ ಜಿಲ್ಲೆಯ ಕೃಷಿ ಇಲಾಖೆಯ 7 ಮಂದಿ ಜಂಟಿ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ ರಾಜ್ಯಪಾಲರಿಗೆ ದೂರು ಸಲ್ಲಿಸಿರುವುದು ರಾಜ್ಯ ಕಾಂಗ್ರೆಸ್ ಸರಕಾರ ರಾಜಾರೋಷವಾಗಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ.

ಲಂಚದ ಅನಿಷ್ಠ ಪದ್ಧತಿಯನ್ನು ನಿಗ್ರಹಿಸಲು ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕುಟುಂಬದೊಂದಿಗೆ ವಿಷ ಕುಡಿಯುವುದಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸದ್ರಿ ಲಂಚ ಪ್ರಕರಣದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿರುವುದು ಸ್ವಾಗತಾರ್ಹ.

ನಯ ವಂಚಕ ಭ್ರಷ್ಟ ಕಾಂಗ್ರೆಸ್ ಪಕ್ಷದ ಗೋಲ್ ಮಾಲ್ ಗ್ಯಾರಂಟಿಗಳನ್ನು ತಾಕತ್ತಿದ್ದರೆ ಕೇಂದ್ರ ಸರಕಾರ ದೇಶದಾದ್ಯಂತ ಜಾರಿ ಮಾಡಲಿ ಎಂದು ಬೊಗಳೆ ಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳೇ ಲಂಚಾವತಾರದಲ್ಲಿ ಮುಳುಗಿರುವುದು ಕಾಣದೇ ಇರುವುದು ವಿಪರ್ಯಾಸ. ಮುಖ್ಯಮಂತ್ರಿಗಳು ತಾಕತ್ತಿದ್ದರೆ ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ಜರಗಿಸುವ ಜೊತೆಗೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ದೈರ್ಯ ತೋರಲಿ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ

   

Related Articles

error: Content is protected !!