ಉಡುಪಿ : ಲೋಕಸಭೆ, ರಾಜ್ಯ ಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರ ಸದಸ್ಯತ್ವವನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ನೂತನ ಸಂಸತ್ ಕಟ್ಟಡದಲ್ಲಿ ನಡೆದ ಮೊದಲ ಕಲಾಪದಲ್ಲಿ ಮಂಡಿಸಿರುವುದು ಪ್ರಧಾನಿ ನರೇಂದ್ರ ಮೋದಿಯವರ ತಾಕತ್ತು. ಈ ಮಸೂದೆ ಮಂಡನೆ ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಸ್ವಾಗತಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸದ್ಯದಲ್ಲೇ ಸಂಸತ್ತಿನಲ್ಲಿ ಅನುಮೋದನೆಗೊಂಡು ಶಾಸನವಾಗಿ ಮಾರ್ಪಾಡಾಗಲಿರುವ ಮಹಿಳಾ ಮೀಸಲಾತಿ ಮಸೂದೆ ನಾರೀ ಶಕ್ತಿಗೆ ಸಂಸತ್ತು ಮತ್ತು ವಿಧಾನಸಭೆಯಲ್ಲಿ 1/3ರಷ್ಟು ಪ್ರಾತಿನಿಧ್ಯ ನೀಡುವ ಮೂಲಕ ವರದಾನವಾಗಲಿದೆ. ಹೊಸ ಕಾನೂನುಗಳ ರಚನೆ ಸಹಿತ ದೇಶದ ಪ್ರಗತಿಯಲ್ಲಿ ಮಹಿಳೆಯರು ಇನ್ನಷ್ಟು ಮಹತ್ತರ ಪಾತ್ರ ವಹಿಸುವ ಅವಕಾಶ ನೀಡುವ ಮಹಿಳಾ ಮೀಸಲಾತಿ ಮಸೂದೆ ಮಂಡನೆಯ ದಿಟ್ಟ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ನಡೆ ಅಭಿನಂದನೀಯ. ಕಳೆದ 9 ವರ್ಷಗಳಿಂದ ಕೇಂದ್ರ ಸರಕಾರ ಮಹಿಳೆಯರಿಗೆ ಅಡುಗೆ ಮನೆಯಿಂದ ಪ್ರಾರಂಭಿಸಿ ವಿವಿಧ ವಿನೂತನ ಯೋಜನೆಗಳನ್ನು ನೀಡಿದೆ. ಮುಂದಿನ ಚುನಾವಣೆಯಲ್ಲಿ ಮಗದೊಮ್ಮೆ ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯನ್ನಾಗಿಸಲು ಮಹಿಳಾ ಮೋರ್ಚಾ ಸಹಿತ ನಾರೀ ಶಕ್ತಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತ ಬೆನ್ನಲ್ಲೇ ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ‘ನಾರೀ ಶಕ್ತಿ ವಂದನ್ ಅಧಿನಿಯಮ್’ ಹೆಸರಿನಲ್ಲಿ ಮಹತ್ವದ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ ಭವನದಲ್ಲಿ ಮಂಡಿಸಿರುವುದು ದೇಶದಾದ್ಯಂತ ಮಹಿಳಾ ಸಮುದಾಯಕ್ಕೆ ದೊಡ್ಡ ಚೈತನ್ಯವನ್ನು ತುಂಬಿದೆ ಎಂದರು.
ಮಹಿಳಾ ಮೀಸಲಾತಿಯ ಬಗ್ಗೆ ಹಲವಾರು ವರ್ಷಗಳಿಂದ ಚರ್ಚೆ ನಡೆಯುತ್ತಿದ್ದರೂ ಮೀಸಲಾತಿ ಮಸೂದೆ ಮಂಡನೆಗೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವವೇ ಬೇಕಾಯಿತು. ಈ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಆಡಳಿತಾವಧಿಯಲ್ಲಿಯೂ ಮಹಿಳಾ ಮೀಸಲಾತಿ ಮಸೂದೆ ಮಂಡಿಸಲ್ಪಟ್ಟಿದ್ದರೂ ಬಹುಮತದ ಕೊರತೆಯಿಂದ ಅಪೂರ್ಣವಾಗಿದ್ದ ಕನಸು ಇಂದು ಮೋದಿ ಆಡಳಿತದಲ್ಲಿ ನನಸಾಗಿದೆ. ಮಹಿಳೆಯರ ಅಭಿವೃದ್ಧಿ ಮತ್ತು ಮೀಸಲಾತಿಯ ಬಗ್ಗೆ ಗಂಭೀರವಾಗಿ ಆಲೋಚಿಸದ ಕಾಂಗ್ರೆಸ್ ಸಹಿತ ವಿಪಕ್ಷಗಳಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಈ ಮಹತ್ವದ ನಿರ್ಣಯವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಮಹಿಳೆಯರಿಗೆ 33% ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಮಸೂದೆಯು ಉಭಯ ಸದನಗಳಲ್ಲಿ ಮಹಿಳೆಯರ ಗರಿಷ್ಠ ಭಾಗವಹಿಸುವಿಕೆಗೆ ನಾಂದಿ ಹಾಡುವ ಮೂಲಕ ನಾರೀ ಶಕ್ತಿಯ ಅನಾವರಣಕ್ಕೆ ಸಾಕ್ಷಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಷ್ಮಿತಾ ಬಿ. ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಜಿಲ್ಲಾ ಕಾರ್ಯದರ್ಶಿಗಳಾದ ಪೂರ್ಣಿಮಾ ರತ್ನಾಕರ್, ಅಶ್ವಿನಿ ಆರ್. ಶೆಟ್ಟಿ, ರೇಣುಕಾ, ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಸುಜಾಲ ಸತೀಶ್, ಉಪಾಧ್ಯಕ್ಷೆ ಸರೋಜಾ ಶೆಣೈ ಹಾಗೂ ಮಹಿಳಾ ಮೋರ್ಚಾ ಜಿಲ್ಲಾ ಮತ್ತು ನಗರ ಪದಾಧಿಕಾರಿಗಳು, ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದರು