ಕಾಂಗ್ರೆಸ್ ಜಾಯಮಾನವೇ ಹಗರಣ ಮತ್ತು ಭ್ರಷ್ಟಾಚಾರ. 1948ರಲ್ಲಿ ಪ್ರಧಾನಿ ನೆಹರೂ ರವರ ಜೀಪ್ ಹಗರಣದಿಂದ ಮೊದಲ್ಗೊಂಡು, ರಾಜೀವ್ ಗಾಂಧಿಯವರ ಬೋಫೋರ್ಸ್, ಮನ್ ಮೋಹನ್ ಸಿಂಗ್ ರವರ ಆದರ್ಶ ಸೊಸೈಟಿ ಹಾಗೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನ್ಯಾಷನಲ್ ಹೆರಾಲ್ಡ್ ಹಗರಣದ ವರೆಗೆ ಆಕಾಶ ಪಾತಾಳ ಭೂಮಿಯಲ್ಲಿ ಕಾಂಗ್ರೆಸ್ ಹಗರಣಗಳ ಸರಮಾಲೆಯೇ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸಿಗರು ಪ್ರತಿಯೊಂದು ಅಭಿವೃದ್ಧಿ ಯೋಜನೆಗಳಲ್ಲೂ ಹಗರಣಗಳ ಕನಸು ಕಾಣುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಪರಶುರಾಮ ಪ್ರತಿಮೆಯ ವಿರುದ್ಧ ಕಾಂಗ್ರೆಸ್ ಹೆಣೆದಿರುವ ಷಡ್ಯಂತ್ರದ ವ್ಯವಸ್ಥಿತ ಅಪಪ್ರಚಾರದಿಂದ ಕಾಂಗ್ರೆಸ್ಸಿನ ಅಭಿವೃದ್ಧಿ ವಿರೋಧಿ ಮನಸ್ಥಿತಿ ಅನಾವರಣಗೊಂಡಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಚಾಲನೆ ದೊರೆತಿಲ್ಲ. ಕಾಂಗ್ರೆಸ್ ಘೋಷಿಸಿದ ಉಚಿತಗಳ ಭಾಗ್ಯಗಳು ದಿನಕ್ಕೊಂದು ಸಬೂಬು ಜೊತೆಗೆ ಹಳ್ಳ ಹಿಡಿದಿವೆ. ಕೇವಲ ನಾಲ್ಕೇ ತಿಂಗಳಲ್ಲಿ ಸಚಿವರ ನಡುವಿನ ಅಸಮಾಧಾನ, ಜಗಳ ತಾರಕಕ್ಕೇರಿದೆ. ಸರಕಾರದ ಈ ಎಲ್ಲಾ ಹುಳುಕುಗಳನ್ನು ಮುಚ್ಚಿಡಲು ಹಾಗೂ ಜನರ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸುವ ಉದ್ದೇಶದಿಂದ ಕಾಂಗ್ರೆಸ್ ಮುಖಂಡರು ಇಲ್ಲಸಲ್ಲದ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಅಪಪ್ರಚಾರ ನಡೆಸುವ ಮೂಲಕ ಜಿಲ್ಲೆಯ ಜನತೆಗೆ ಮಂಕು ಬೂದಿ ಎರಚುತ್ತಿರುವುದು ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಆಡಳಿತಾವಧಿಯಲ್ಲಿ ಮಾಜಿ ಸಚಿವ ಹಾಗೂ ಕಾರ್ಕಳದ ಕ್ರಿಯಾಶೀಲ ಶಾಸಕ ವಿ.ಸುನೀಲ್ ಕುಮಾರ್ ರವರ ವಿಶೇಷ ಮುತುರ್ವಜಿಯಿಂದ ಮಂಜೂರುಗೊಂಡಿದ್ದ ಅನುದಾನದಲ್ಲಿ ಕಾರ್ಕಳ ತಾಲೂಕಿನ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ, ತುಳುನಾಡಿನ ಸೃಷ್ಟಿಕರ್ತ ಭಗವಾನ್ ಪರಶುರಾಮ ಪ್ರತಿಮೆ ಸ್ಥಾಪನೆಯ ಜೊತೆಗೆ ಐತಿಹಾಸಿಕ ಪರಶುರಾಮ ಥೀಮ್ ಪಾರ್ಕ್ ಯೋಜನೆ ಚಾಲನೆಗೊಂಡಿದೆ. ಈ ಯೋಜನೆಯಡಿ ಭಾಗಶಃ ಬಿಡುಗಡೆಯಾಗಿದ್ದ ರೂ.6.50 ಕೋಟಿ ಅನುದಾನದಲ್ಲಿ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡಿರುವುದು ವಾಸ್ತವ.
ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆಗೊಳ್ಳುವ ಸಂದರ್ಭದಲ್ಲೇ, ಪ್ರತಿಮೆಯ ಮುಕ್ತಾಯ ಹಂತದ ಕೆಲವೊಂದು ಕಾಮಗಾರಿಯನ್ನು ಬಾಕಿ ಅನುದಾನ ಬಿಡುಗಡೆ ಜೊತೆಗೆ ಪೂರ್ಣಗೊಳಿಸುವ ಕುರಿತು ಶಾಸಕ ವಿ.ಸುನೀಲ್ ಕುಮಾರ್ ರವರು ಸ್ಪಷ್ಟನೆ ನೀಡಿದ್ದರು. ಆದರೂ ಕಾರ್ಕಳದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಸಹಿಸದ ಕಾಂಗ್ರೆಸ್ ನಾಯಕರ ದಂಡು ಅನಾವಶ್ಯಕವಾಗಿ ಪರಶುರಾಮ ಪ್ರತಿಮೆಯ ನೈಜತೆಯ ಬಗ್ಗೆ ಹುಯಿಲೆಬ್ಬಿಸಿ, ಪ್ರತಿಮೆಯ ಜೋಡಣೆಯ ವೆಲ್ಡಿಂಗ್ ಸ್ಥಳಗಳಲ್ಲಿ ಅಳವಡಿಸಲಾದ ಪಿಒಪಿ ಹಾಳೆಗಳನ್ನು ಹರಿದು ಪ್ರದರ್ಶಿಸಿ ಫೈಬರ್ ಪ್ರತಿಮೆ ಎಂಬ ಸುಳ್ಳು ವಾದವನ್ನು ತೇಲಿಬಿಟ್ಟು ಸಮಯಸಾಧಕತನವನ್ನು ಪ್ರದರ್ಶಿಸಿರುವುದು ವಿಪರ್ಯಾಸ.
ಮೂವತ್ತಮೂರು ಅಡಿ ಎತ್ತರದ ಪರಶುರಾಮ ಪ್ರತಿಮೆಯನ್ನು ಗುತ್ತಿಗೆದಾರರು ಕಂಚಿನಲ್ಲಿ ನಿರ್ಮಿಸಿದ್ದರೂ, ಕಾಂಗ್ರೆಸಿಗರು ಮಾತ್ರ ಪ್ರತಿಮೆ ಕಂಚಿನದ್ದಲ್ಲ ಫೈಬರ್ ನಿಂದ ನಿರ್ಮಿಸಿದ್ದು ಎಂಬ ಆಧಾರ ರಹಿತ ಪೊಳ್ಳು ವಾದವನ್ನು ಮುಂದಿಟ್ಟುಕೊಂಡು ಹಾದಿ ಬೀದಿಗಳಲ್ಲಿ ಪ್ರತಿಭಟನೆಯ ನಾಟಕವನ್ನಾಡಿ, ಇದೀಗ ವಿವಿಧ ಆಯಾಮಗಳಲ್ಲಿ ವಾಸ್ತವಿಕತೆಯ ವಿಚಾರಗಳು ಪ್ರಚಲಿತಗೊಂಡಿರುವ ಹಿನ್ನೆಲೆಯಲ್ಲಿ ತೀವ್ರ ಮುಖಭಂಗ ಅನುಭವಿಸುತ್ತಿರುವುದು ಜಗಜ್ಜಾಹೀರಾಗಿದೆ.
ಪರಶುರಾಮ ಥೀಮ್ ಪಾರ್ಕ್ ಯೋಜನೆಯನ್ನು ಕೈಗೆತ್ತಿಕೊಂಡಿರುವ, ರಾಜ್ಯ ಸರಕಾರದ ಆಡಳಿತ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ನಿರ್ಮಿತಿ ಕೇಂದ್ರ ಪರಶುರಾಮ ಪ್ರತಿಮೆ ಹಾಗೂ ಥೀಮ್ ಪಾರ್ಕ್ ಕಾಮಗಾರಿಯ ಕುರಿತು ಪತ್ರಿಕಾ ಪ್ರಕಟಣೆಯ ಮೂಲಕ ಸವಿಸ್ತಾರ ಮಾಹಿತಿಯನ್ನು ನೀಡಿದೆ. ಸ್ವತಃ ಪ್ರತಿಮೆಯನ್ನು ನಿರ್ಮಿಸಿರುವ ಶಿಲ್ಪಿ ಕೃಷ್ಣಾ ನಾಯಕ್ ರವರೇ ಪ್ರತಿಮೆಯ ನೈಜತೆಯ ಬಗ್ಗೆ ವಿಸ್ತೃತ ವಿವರಣೆ ನೀಡಿದ್ದು, ಪ್ರತಿಮೆ 100% ಕಂಚಿನದ್ದಾಗಿದ್ದು, ಪ್ರತಿಮೆಯಲ್ಲಿ ನಿಗದಿತ ಪ್ರಮಾಣದ ಕಂಚು ಬಳಕೆಯಾಗದೇ ಇರುವುದು ಸಾಬೀತಾದರೆ ತಾನು ಶಿಲ್ಪ ಕಲೆಯ ಕಾಯಕವನ್ನೇ ತೊರೆಯುವುದಾಗಿ ಹೇಳಿಕೆ ನೀಡಿರುವುದು ಕಾಂಗ್ರೆಸ್ಸಿನ ನಕಲಿ ಹೋರಾಟಗಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಫೈಬರ್ ಮೂರ್ತಿ ಸ್ಥಾಪಿಸಿ ಹಿಂದೂಗಳ ಭಾವನೆಗೆ ದಕ್ಕೆ ತರಲಾಗಿದೆ ಎಂದು ಬೊಗಳೆ ಬಿಡುತ್ತಿರುವ ಕಾಂಗ್ರೆಸ್ ಮುಖಂಡರು ವ್ಯರ್ಥ ಬೀದಿ ರಂಪಾಟ ನಡೆಸುವ ಬದಲು ಪ್ರತಿಮೆಯ ನೈಜತೆಯ ಬಗ್ಗೆ ಸರಕಾರದ ಮುಖಾಂತರ ಸೂಕ್ತ ತನಿಖೆ ನಡೆಸುವ ಎದೆಗಾರಿಕೆ ತೋರಲಿ. ಜೊತೆಗೆ ತಮ್ಮದೇ ಸರಕಾರಕ್ಕೆ ಒತ್ತಡ ಹೇರಿ ಪರಶುರಾಮ ಥೀಮ್ ಪಾರ್ಕ್ ಯೋಜನೆಯ ಬಾಕಿ ಇರುವ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸಲು ಹೋರಾಟ ನಡೆಸುವುದು ಸೂಕ್ತ. ನಕಲಿ ಹೋರಾಟದ ಸಂದರ್ಭದಲ್ಲಿ ಹಿಂದೂ ದ್ವೇಷಿ ಕಾಂಗ್ರೆಸ್ಸಿಗೆ ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆ ಕಾಳಜಿ ಉಕ್ಕಿ ಬಂದಿರುವುದು ಹಾಸ್ಯಾಸ್ಪದವಾಗಿದೆ.
ಪರಶುರಾಮ ಥೀಮ್ ಪಾರ್ಕ್ ಯೋಜನೆಯ ಪರಿಪೂರ್ಣ ಅನುಷ್ಠಾನದ ಗುರಿಯೊಂದಿಗೆ ಐತಿಹಾಸಿಕ ನಗರಿ ಕಾರ್ಕಳವನ್ನು ಜಿಲ್ಲೆಯಲ್ಲೇ ಆಕರ್ಷಣೀಯ ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ಶ್ರಮಿಸುತ್ತಿರುವ ಕಾರ್ಕಳ ಶಾಸಕರ ಬದ್ಧತೆ ಪ್ರಶಂಸನೀಯ. ಅಭಿವೃದ್ಧಿಯ ವಿಚಾರದಲ್ಲೂ ರಾಜಕೀಯದ ಚದುರಂಗದಾಟವಾಡುತ್ತಿರುವ ಕಾಂಗ್ರೆಸ್ಸಿಗೆ ಜನತೆ ಮುಂದಿನ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.