ಉಡುಪಿ : ಕೂಳಿಗಾಗಿ ದುಡಿಯುವ ಕಾರ್ಮಿಕ ವರ್ಗದ ಮೇಲೆ ಕೇಸ್ ದಾಖಲು; ಹೊಟ್ಟೆ ತುಂಬಿದ ಕುಬೇರ ಮೇಲಿನ ಕೇಸ್ ವಾಪಸ್; ಇದು ರಾಜ್ಯ ಕಾಂಗ್ರೆಸ್ ಸರಕಾರದ ದ್ವಿಮುಖ ನೀತಿಯಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಟ್ಟಡ ಸಾಮಗ್ರಿ ಸಾಗಾಟದ ಹಳೇ ಲಾರಿಗಳ ಮಾಲಕ, ಚಾಲಕರ ಮೇಲೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಅತ್ತ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿ ಸಿಬಿಐ ದಾಖಲಿಸಿಕೊಂಡಿರುವ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ. ಉಳ್ಳವರಿಗೊಂದು ನ್ಯಾಯ; ಇಲ್ಲದವರಿಗೊಂದು ನ್ಯಾಯ. ಇದು ಬಡವರ ಉದ್ಧಾರ ಮಾಡುತ್ತೇವೆ ಎಂದು ಬೊಗಳೆ ಬಿಡುತ್ತಾ ಬಂದಿರುವ ಕಾಂಗ್ರೆಸ್ ಪಕ್ಷದ ಬಡವರ ವಿರೋಧಿ ನೀತಿಯಾಗಿದೆ.
ಆಕ್ರಮ ಆದಾಯ ಗಳಿಕೆಯ ಬಗ್ಗೆ ಪ್ರಾಥಮಿಕ ವರದಿಯನ್ನು ಆಧರಿಸಿಯೇ ಈ ಹಿಂದಿನ ಬಿಜೆಪಿ ಸರಕಾರ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿದ್ದು, ಅದರಲ್ಲೇನಾದರೂ ಲೋಪವಿದ್ದಲ್ಲಿ ವಿಪಕ್ಷದಲ್ಲಿದ್ದ ಕಾಂಗ್ರೆಸ್ ನಾಯಕರು ಅಂದೇ ಯಾಕೆ ಚಕಾರವೆತ್ತಿಲ್ಲ ಎಂಬುದು ಪ್ರಶ್ನಾರ್ಥಕವಾಗಿದೆ. ಇಂದು ಹಠಾತ್ತಾಗಿ ರಾಜ್ಯ ಸಚಿವ ಸಂಪುಟ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣವನ್ನು ವಾಪಾಸು ಪಡೆಯುವ ನಿರ್ಧಾರ ಕೈಗೊoಡಿರುವುದು ಯಾರ ಕಟ್ಟಪ್ಪಣೆಯ ಮೇರೆಗೆ ಎoಬುದನ್ನು ಸರಕಾರ ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕಾಗಿದೆ.
ಬ್ರಹ್ಮಾಂಡ ಭ್ರಷ್ಟಾಚಾರ, ಕಮಿಷನ್ ದಂಧೆ, ಪಂಚ ರಾಜ್ಯ ಚುನಾವಣೆಗಾಗಿ ರಾಜ್ಯ ಲೂಟಿ, ಸ್ವಜನ ಪಕ್ಷಪಾತ, ಗ್ಯಾರಂಟಿಗಳ ವೈಫಲ್ಯ, ಸಿಎಂ-ಡಿಸಿಎಂ ಪೈಪೋಟಿ, ಸಚಿವರ ಲಂಗು ಲಗಾಮಿಲ್ಲದ ಹೇಳಿಕೆಗಳು, ಅಭಿವೃದ್ಧಿ ಸ್ಥಗಿತ, ರಾಜಕೀಯ ಓಲೈಕೆಗಾಗಿ ತಮಿಳುನಾಡಿಗೆ ನೀರು, ರೈತ ವಿರೋಧಿ ನೀತಿ, ರೈತರ ಸರಣಿ ಆತ್ಮಹತ್ಯೆ, ಬರ ನಿರ್ವಹಣೆಯಲ್ಲಿ ವೈಫಲ್ಯ, ಶ್ಯಾಡೋ ಸಿಎಂ, ಹಿಂದೂ ಧಮನ ನೀತಿ, ಕತ್ತಲ ಭಾಗ್ಯ ಇವೇ ಮುಂತಾದ ನೂರಾರು ವೈಫಲ್ಯಗಳನ್ನು ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ ನಾಚಿಕೆ, ಮಾನ ಮರ್ಯಾದೆ ಎಲ್ಲವನ್ನೂ ಕಳೆದುಕೊಂಡಿದೆ.
ಸಚಿವರ ದುರಹಂಕಾರದ ನಡೆ, ಸ್ಪೀಕರ್ ಸ್ಥಾನವನ್ನು ಧರ್ಮದ ದೃಷ್ಠಿಯಲ್ಲಿ ಕಂಡು ಹೀನಾಯ ಹೇಳಿಕೆ ನೀಡಿದ ಓರ್ವ ಸಚಿವನ ಮತಾಂಧತೆಯ ಪ್ರದರ್ಶನ, ಅಧಿಕಾರಕ್ಕಾಗಿ ಬಣ ರಾಜಕೀಯದಲ್ಲಿ ನಿರತರಾಗಿರುವ ಸಚಿವರು, ಶಾಸಕರ ಒಡ್ಡೋಲಗದ ನಡುವೆ ದೇಶದ ಶ್ರೀಮಂತ ರಾಜಕಾರಿಣಿ ಡಿಸಿಎಂ ಡಿ.ಕೆ. ಶಿವಕುಮಾರ್ ರವರ ಸಿಬಿಐ ಪ್ರಕರಣದ ವಾಪಸ್ ಪ್ರಹಸನ ರಾಜ್ಯದ ಜನತೆಯ ನೆಮ್ಮದಿ ಭಂಗ ಮಾಡಿದೆ. ಈ ಕೆಟ್ಟ ಸರಕಾರ ಯಾವಾಗ ತೊಲಗುತ್ತದೆ ಎಂದು ಕಾತರದಿಂದ ಕಾಯುತ್ತಿರುವ ರಾಜ್ಯದ ಜನತೆ ಮುಂದಿನ ಎಲ್ಲ ಚುನಾವಣೆಗಳಲ್ಲಿ ‘ನುಡಿದಂತೆ ನಡೆಯದ, ಮಾತು ತಪ್ಪಿದ’ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ