Home » ಸಹಿ ಸಂಗ್ರಹ ಅಭಿಯಾನ ಯಶಸ್ವಿಗೊಳಿಸಲು ಕುಯಿಲಾಡಿ ಕರೆ
 

ಸಹಿ ಸಂಗ್ರಹ ಅಭಿಯಾನ ಯಶಸ್ವಿಗೊಳಿಸಲು ಕುಯಿಲಾಡಿ ಕರೆ

by Kundapur Xpress
Spread the love

ಉಡುಪಿ : ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಪಕ್ಷದ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿದೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ದೇಶಕ್ಕೆ ಪ್ರಧಾನಿ ಮೋದಿಯೇ ನೈಜ ಗ್ಯಾರಂಟಿ ಎಂಬುದನ್ನು ಸಾಬೀತುಪಡಿಸಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಪಕ್ಷದ ಸಂಘಟನಾತ್ಮಕ ಕೆಲಸ ಕಾರ್ಯಗಳಲ್ಲಿ ಇನ್ನಷ್ಟು ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳುವ ಜೊತೆಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ‘ಎನ್ಇಪಿ-2020’ನ್ನು ಮುಂದುವರಿಸುವಂತೆ ಆಗ್ರಹಿಸುವ ಸಹಿ ಸಂಗ್ರಹ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು. ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸುಮಾರು 70 ಜನಪರ ಯೋಜನೆಗಳ ಕುರಿತು ಮಾಹಿತಿ ನೀಡಿ, ಫಲಾನುಭವಿಗಳನ್ನು ಗುರುತಿಸಿ, ಸಮಾಜದ ಕಟ್ಟಕಡೆಯ ವ್ಯಕಿಗೂ ಯೋಜನೆಗಳನ್ನು ತಲುಪಿಸುವ ಗುರಿಯೊಂದಿಗೆ ಲೀಡ್ ಬ್ಯಾಂಕಿನ ಸಹಕಾರದಿಂದ ನಡೆಯುವ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಪ್ರತೀ ಗ್ರಾಮ ಪಂಚಾಯತ್ ಗಳಿಗೂ ಸಂಚರಿಸಲಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಉಚಿತ ಗ್ಯಾರಂಟಿಗಳು ವಿಫಲವಾಗಿರುವ ಸನ್ನಿವೇಶದಲ್ಲಿ ಕೇಂದ್ರ ಸರಕಾರದ ಶಾಶ್ವತ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದು ಅವರು ತಿಳಿಸಿದರು

ದೇಶದ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ, ಕೌಶಲ್ಯಾಧಾರಿತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಮಲತಾಯಿ ಧೋರಣೆ ಅನುಸರಿಸದೆ ಮುಂದುವರಿಸುವಂತೆ ಆಗ್ರಹಿಸಿ ನಡೆಯಲಿರುವ ಸಹಿ ಸಂಗ್ರಹ ಅಭಿಯಾನವನ್ನು ಪ್ರತೀ ಬೂತ್ ಮಟ್ಟದಲ್ಲಿಯೂ ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು.

ಅಯೋಧ್ಯೆಯ ಶ್ರೀ ರಾಮ ಮಂದಿರದಿಂದ ಬಂದಿರುವ ಅಕ್ಷತೆ ಹಾಗೂ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಮನೆ ಮನೆಗೆ ವಿತರಿಸುವ ಸತ್ಕಾರ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರೊಂದಿಗೆ ಪಕ್ಷದ ಕಾರ್ಯಕರ್ತರು ಕೈ ಜೋಡಿಸುವ ಜೊತೆಗೆ ನೈಋತ್ಯ ಪದವೀಧರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ಮತದಾರ ಪಟ್ಟಿಗೆ ಹೆಸರು ನೋಂದಾಯಿಸುವ ಪ್ರಕ್ರಿಯೆಗೆ ವೇಗ ನೀಡಬೇಕು. ಕೇಂದ್ರ ಸರಕಾರದ ಜನಪರ ಯೋಜನೆಗಳು ಮತ್ತು ರಾಜ್ಯ ಸರಕಾರದ ಆಡಳಿತ ವೈಫಲ್ಯಗಳನ್ನು ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಪ್ರಚಾರಪಡಿಸುವ ಮೂಲಕ ಮುಂದಿನ ಲೋಕಸಭೆ ಸಹಿತ ಎಲ್ಲ ಚುನಾವಣೆಗಳಲ್ಲಿ ಪಕ್ಷದ ವಿಜಯಯಾತ್ರೆಯನ್ನು ಮುಂದುವರಿಸಲು ಬದ್ಧತೆಯಿಂದ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ ಸಂಘಟನಾತ್ಮಕ ವಿಚಾರಗಳ ಬಗ್ಗೆ ಮಾಹಿತಿ ನೀಡಿ, ಡಿ.30ರೊಳಗೆ ಮಂಡಲಗಳ ಕಾರ್ಯಕಾರಿಣಿ ಸಭೆಗಳನ್ನು ನಡೆಸಬೇಕು ಎಂದರು. ಮನೋಹರ್ ಎಸ್. ಕಲ್ಮಾಡಿ ಮಾತನಾಡಿ ಮತದಾರ ಪಟ್ಟಿ ಪರಿಷ್ಕರಣೆ ಕುರಿತು ಸಮಗ್ರ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಉಮೇಶ್ ನಾಯ್ಕ್, ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಘವೇಂದ್ರ ಉಪ್ಪೂರು, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಸಹಿತ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು

   

Related Articles

error: Content is protected !!