ಬೈಂದೂರು : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಬೈಂದೂರಿನಿಂದ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡುವ ಸಂಕಲ್ಪ ಸಾಧನೆಗಾಗಿ ಶಾಸಕರಾದ ಗುರುರಾಜ ಗಂಟಿಹೊಳೆಯವರು ಎಲ್ಲ ಶಕ್ತಿಕೇಂದ್ರದ ಪ್ರಮುಖರ ಸಭೆಯನ್ನು ಶ್ರೀ ಅಂಬಿಕಾ ಇಂಟರ್ನ್ಯಾಶನಲ್ ಹೋಟೆಲ್ ನಲ್ಲಿ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು. ಇದೇ ವೇಳೆ 64 ಶಕ್ತಿಕೇಂದ್ರದ ಅಧ್ಯಕ್ಷರು ತಮ್ಮ ವ್ಯಾಪ್ತಿಯಲ್ಲಿ ಚುನಾವಣೆ ಪ್ರಚಾರ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲು ಅನುಕೂಲವಾಗುವಂತೆ ಮತ್ತು ಪೇಜ್ ಪ್ರಮುಖರ ನೇಮಕ ಹಾಗೂ ನಿರ್ವಹಣೆಗೆ ಪೂರಕವಾಗಿ ಶಕ್ತಿಕೇಂದ್ರದ ಪ್ರಮುಖರಿಗೆ ಸಹಕಾರಿಗಳನ್ನು ನಿಯೋಜಿಸಲಾಯಿತು. ಶಾಸಕರಾದ ಗುರುರಾಜ ಗಂಟಿಹೊಳೆಯವರು ಮಾತನಾಡಿ, ಈ ಚುನಾವಣಾ ಯಜ್ಞದಲ್ಲಿ ನಾವೆಲ್ಲರೂ ಸಂಘಟಿತರಾಗಿ ಕಾರ್ಯ ನಿರ್ವಹಿಸಬೇಕು. ನಮ್ಮ ವ್ಯಾಪ್ತಿಯ ಶಕ್ತಿಕೇಂದ್ರ, ಬೂತ್ ಗಳಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಅತ್ಯಧಿಕ ಪ್ರಮಾಣದಲ್ಲಿ ಲೀಡ್ ಬರುವಂತೆ ಗಮನ ಹರಿಸಬೇಕು. ನಮ್ಮ ವ್ಯಾಪ್ತಿಯ ಎಲ್ಲ ಬೂತ್ ಗಳಲ್ಲೂ ಪೇಜ್ ಪ್ರಮುಖರ ನೇಮಕ, ಅವರಿಗೆ ಜವಾಬ್ದಾರಿ ಹಂಚಿಕೆ ಹಾಗೂ ಚುನಾವಣೆ ನಿಮಿತ್ತವಾಗಿ ಮಾಡಬೇಕಾದ ನಿರ್ದಿಷ್ಟ ಕಾರ್ಯಗಳ ಸ್ಪಷ್ಟ ಮಾಹಿತಿ ನೀಡಬೇಕು ಎಂದರು. ಪೇಜ್ ಪ್ರಮುಖರು ತಮ್ಮ ಪಟ್ಟಿಯಲ್ಲಿರುವ ಮತದಾರರನ್ನು ನಿಯಮಿತವಾಗಿ ಅವರು ಭೇಟಿ ಮಾಡಿ, ಅವರಿಗೆ ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಮಾಡಿಯುವ ಸಾಧನೆ, ಆಯುಷ್ಮಾನ್, ಕಿಸಾನ್ ಸಮ್ಮಾನ್, ಮುದ್ರಾ ಮೊದಲಾದ ಯೋಜನೆಗಳ ಸ್ಪಷ್ಟ ಮಾಹಿತಿ ನೀಡಬೇಕು. ಅದರ ಜೊತೆಗೆ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಸಂಸದರಾಗಿ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಮನೆ ಮನೆಗೆ ತಲುಪಿಸಬೇಕು. ಆ ಮೂಲಕ ಬಿಜೆಪಿಗೆ ಮತ ಬರುವಂತೆ ನೋಡಿಕೊಳ್ಳಬೇಕು ಹಾಗೂ ಶಕ್ತಿಕೇಂದ್ರದ ಅಧ್ಯಕ್ಷರು ನಿರಂತರವಾಗಿ ಇದರ ನಿಗಾ ವಹಿಸಬೇಕು ಎಂಬ ಸೂಚನೆ ನೀಡಿದರು. ಯಾವುದೇ ಗೊಂದಲ ಇಲ್ಲದೆ ಎಲ್ಲರೂ ಸಮನ್ವಯದಿಂದ ಸಂಘಟಿತರಾಗಿ ಚುನಾವಣಾ ಕಾರ್ಯದಲ್ಲಿ ತೊಡಗಿ ಕೊಳ್ಳಬೇಕು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದ ಲೀಡ್ ನೀಡುವುದೇ ನಮ್ಮ ಮುಖ್ಯ ಗುರಿ ಎಂಬುದನ್ನು ನಾವೆಲ್ಲರೂ ಸ್ಪಷ್ಟವಾಗಿ ಅರಿತಿರಬೇಕು ಎಂದರು. ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಮಂಡಲ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಪೂಜಾರಿ, ಪ್ರಮುಖರಾದ ಗೋಪಾಲ್, ದಿನಾಕರ್, ಮಂಡಲ, ಮಹಾ ಶಕ್ತಿಕೇಂದ್ರ ಶಕ್ತಿಕೇಂದ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು