ಬೈಂದೂರು: ಬಿಜೆಪಿ ಬೈಂದೂರು ಮಂಡಲದ ಹಿಂದೂಳಿದ ವರ್ಗಗಳ ಮೋರ್ಚಾದ ಶಿರೂರು ಹಾಗೂ ಬೈಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ ಶಕ್ತಿಕೇಂದ್ರ ಮತ್ತು ಬೂತ್ ಮಟ್ಟದ ಪಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಶಾಸಕರಾದ ಗುರುರಾಜ ಗಂಟಿಹೊಳೆಯವರ ನೇತೃತ್ವದಲ್ಲಿ ಬೈಂದೂರಿನ ಶ್ರೀ ಅಂಬಿಕಾ ಇಂಟರ್‌ನ್ಯಾಷನಲ್ ಹೊಟೇಲ್‌ನಲ್ಲಿ ಗುರುವಾರ ಸಂಜೆ ನಡೆಯಿತು. ಶಾಸಕರಾದ ಗುರುರಾಜ ಗಂಟಿಹೊಳೆಯವರು ಮಾತನಾಡಿ, ಪಕ್ಷದ ಸಂಘಟನಾತ್ಮಕ ವ್ಯವಸ್ಥೆಯಲ್ಲಿ ಹಲವು ಮೋರ್ಚಾಗಳು ಕಾರ್ಯನಿರ್ವಹಿಸುತ್ತಿವೆ. ಮಹಿಳೆಯರ ಮಧ್ಯೆ ಮಹಿಳಾ ಮೋರ್ಚಾ, ರೈತರ ಮಧ್ಯೆ ರೈತ ಮೋರ್ಚಾ ಕಾರ್ಯನಿರ್ವಹಿಸುತ್ತಿರುವಂತೆ ಹಿಂದುಳಿದ ವರ್ಗಗಳ ಮಧ್ಯೆ ಒಬಿಸಿ ಮೋರ್ಚಾ ಕಾರ್ಯನಿರ್ವಹಿಸುತ್ತಿದೆ. ಹಿಂದುಳಿದ ವರ್ಗ ಬಿಜೆಪಿಯ ದೊಡ್ಡ ಶಕ್ತಿಯಿದ್ದಂತೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ನಮ್ಮ ಸಂಸದರೂ ಆದ ಬಿ.ವೈ. ರಾಘವೇಂದ್ರ ಅವರಿಗೆ ಬೈಂದೂರಿನಿಂದಲೇ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡುವ ಸಂಕಲ್ಪ ಮಾಡಿದ್ದೇವೆ. ಅದರಂತೆ ಬೂತ್ ಕಡೆಗೆ ಸಮೃದ್ಧ ನಡಿಗೆ ಸಹಿತ ಹಲವು ಕಾರ್ಯಕ್ರಮಗಳು, ಪ್ರಚಾರ ಪ್ರಕ್ರಿಯೆ ನಡೆಯುತ್ತಿದೆ. ಒಬಿಸಿ ಮೋರ್ಚಾದ ಪ್ರದಗ್ರಹಣ ಮತ್ತು ಹೊಸ ತಂಡವು ಪಕ್ಷಕ್ಕೆ ಮಂಡಲದಲ್ಲಿ ಇನ್ನಷ್ಟು ಶಕ್ತಿ ತುಂಬಲಿ ಹಾಗೂ ಸಂಘಟನಾತ್ಮಕವಾಗಿ ಪಕ್ಷ ಬೆಳೆಯಲು ಸಹಕಾರಿಯಾಗುವಂತೆ ಕಾರ್ಯ ನಿರ್ವಹಿಸಲು ಕರೆ ನೀಡಿದರು. ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ವಿಜಯ ಕೊಡವೂರು ಮಾತನಾಡಿ, ಪಕ್ಷವೂ ಎಲ್ಲ ಸಣ್ಣ ಸಣ್ಣ ಸಮಾಜವನ್ನು ಮುಟ್ಟಬೇಕು ಎನ್ನುವ ನೆಲೆಯಲ್ಲಿ ಮೋರ್ಚಾ ರಚನೆಯಾಗಿದೆ. ಚುನಾವಣೆಗೆ ಕೆಲವೇ ದಿನ ಬಾಕಿಯಿದೆ ಕೇಂದ್ರ ಸರಕಾರದ ಸಾಧನೆ ಹಾಗೂ ಬಿ.ವೈ. ರಾಘವೇಂದ್ರ ಅವರು ಸಂಸದರಾಗಿ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಎಲ್ಲ ಮನೆಗಳಿಗೂ ತಲುಪಿಸಬೇಕು. ದೇಶ, ಧರ್ಮದ ಉಳಿವಿಗಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಬೇಕಾಗಿದೆ. ಈ ಚುನಾವಣೆ ಯಜ್ಞದಲ್ಲಿ ಎಲ್ಲ ಜಾತಿಗಳನ್ನು ಒಗ್ಗೂಡಿಸಿಕೊಂಡು ಹೋಗುವ ಜತೆಗೆ ಬಿಜೆಪಿ ಅಭ್ಯರ್ಥಿಗೆ ದಾಖಲೆಯ ಲೀಡ್ ಕೊಡಿಸುವ ಕಾರ್ಯವೂ ಆಗಬೇಕು. ಪಕ್ಷ ಸಂಘಟನೆಯೂ ಚೆನ್ನಾಗಿ ನಡೆಯಬೇಕು. ಕೇಡರ್ ಚೆನ್ನಾಗಿದ್ದರೆ ಉಳಿದೆಲ್ಲವೂ ಚೆನ್ನಾಗಿ ಆಗುತ್ತದೆ ಎಂದರು. ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಒಬಿಸಿ ಮೋರ್ಚಾದ ಕಾರ್ಯವೈಖರಿ ಹಾಗೂ ಚುನಾವಣೆ ನಿಮಿತ್ತ ಆಗಬೇಕಿರುವ ಕಾರ್ಯದ ಬಗ್ಗೆ ಸ್ಥೂಲವಾದ ಮಾಹಿತಿ ನೀಡಿದರು. ನಂತರ ಪದಗ್ರಹಣ ಕಾರ್ಯನಡೆಯಿತು. ಮಂಡಲದ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಪೂಜಾರಿ, ಮಂಡಲದ ಒಬಿಸಿ ಅಧ್ಯಕ್ಷ ಶಿವರಾಜ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ದೇವಾಡಿಗ ಹಾಗೂ ರಾಘವೇಂದ್ರ ಕೊಠಾರಿ, ಶಿರೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ ಮೊಗವೀರ, ಪಟ್ಟಣ ಪಂಚಾಯತಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಗೋಪಾಲಕೃಷ್ಣ, ಪದಾಧಿಕಾರಿಗಳಾದ ಗಿರೀಶ್ ಶಿರೂರು, ಚಂದ್ರಶೇಖರ್ ದೇವಾಡಿಗ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಬಟ್ವಾಡಿ, ಪ್ರಮುಖರಾದ, ಗೋಪಾಲ್, ಆನಂದ ಖಾರ್ವಿ ಸೇರಿದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.