Home » ಕಿರಿಮಂಜೇಶ್ವರದಲ್ಲಿ ಯುವಶಕ್ತಿ ಸಮಾವೇಶ
 

ಕಿರಿಮಂಜೇಶ್ವರದಲ್ಲಿ ಯುವಶಕ್ತಿ ಸಮಾವೇಶ

by Kundapur Xpress
Spread the love

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಈ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಅಭ್ಯರ್ಥಿಯೇ ಇರುವುದಿಲ್ಲ. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆಗೂ ಕ್ಯಾಂಡಿಡೇಟ್ ಇರುವುದಿಲ್ಲ ಎಂದು ರಾಜ್ಯ ಬಿಜೆಪಿ ಸಂಘಟನ ಪ್ರಧಾನ ಕಾರ್ಯದರ್ಶಿ ರಾಜೇಶ್ ಹೇಳಿದರು.
ಕಿರಿಮಂಜೇಶ್ವರದಲ್ಲಿ ಶನಿವಾರ ನಡೆದ ಯುವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದು ಲಕ್ಷಕ್ಕೂ ಅಧಿಕ ಲೀಡ್ ಬೈಂದೂರಿನಿಂದ ಬಂದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಈ ಕ್ಷೇತ್ರದಿಂದ ಶಾಸಕ ಸ್ಥಾಾನಕ್ಕೆ ಸ್ಪರ್ಧಿಸಲು ಅಭ್ಯರ್ಥಿಯೇ ಇರುವುದಿಲ್ಲ. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆಗೂ ಕ್ಯಾಂಡಿಡೇಟ್ ಇರುವುದಿಲ್ಲ. ಈ ಚುನಾವಣೆಯಲ್ಲಿ ನಾವು ಅಭೂತಪೂರ್ವವಾಗಿ ಗೆದ್ದರೆ ಮುಂದಿನ 20 ವರ್ಷ ನಮ್ಮನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ ಹಾಗೂ ಕಾಂಗ್ರೆಸ್ ನಿರ್ನಾಮವಾಗಿ ಹೋಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲೂ ಮತ ಕೇಳಬಹುದು, ನಮ್ಮ ಸಂಸದರ ಹೆಸರಿನಲ್ಲೂ ಮತ ಕೇಳಬಹುದು. ಇಬ್ಬರೂ ಕಳಂಕ ಇಲ್ಲದೇ, ಒಂದೂ ಕಪ್ಪು ಚುಕ್ಕೆ ಇಲ್ಲದೆಯೇ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ನಾವು ಅವರಿಬ್ಬರ ಅಭಿವೃದ್ಧಿ ಕಾರ್ಯವನ್ನು ಮುಂದಿಟ್ಟುಕೊಂಡು ಗರ್ವದಿಂದ ಮತ ಕೇಳಬಹುದು. ಇಬ್ಬರೂ ಕಾರ್ಯಕರ್ತರು ತಲೆ ತಗ್ಗಿಸುವ ಕಾರ್ಯ ಕಾರ್ಯವನ್ನು ಮಾಡಿಲ್ಲ. ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಜನರೊಂದಿಗೆ ಇದ್ದು ಕಾರ್ತಕರ್ತ ಶಾಸಕ ಎನಿಸಿಕೊಂಡಿದ್ದಾರೆ. ಬೂತ್ ಕಡೆಗೆ ಸಮೃದ್ಧ ನಡಿಗೆ ಎಲ್ಲರಿಗೂ ಮಾದರಿ ಎಂದರು.
ನಾವು ಪ್ರಧಾನಿ ಮೋದಿಯವರ ಹೆಸರಿನಲ್ಲಿ ಮತ ಕೇಳುತ್ತೇವೆ ಮತ್ತು ಮೋದಿಯವರೇ ನಮ್ಮ ಮುಂದಿನ ಪ್ರಧಾನಿ ಎನ್ನುತ್ತೇವೆ. ಕಾಂಗ್ರೆಸ್‌ಗೆ ರಾಹುಲ್ ಗಾಂಧಿ ಹೆಸರಿನಲ್ಲಿ ಮತ ಕೇಳುವ ತಾಕತ್ತು ಇದಯೇ? ಅವರನ್ನು ಪ್ರಧಾನಿ ಮಾಡುತ್ತೇವೆ ಎಂದು ಕಾರ್ಯಕರ್ತರು ಬಿಡಿ ಮುಖಂಡರು ಹೇಳಲು ಸಿದ್ದರಿಲ್ಲ. ಹೀಗಾಗಿ ಬಿಜೆಪಿ ಕಾರ್ಯಕರ್ತರು ನಾಯಕತ್ವದ ವಿಶ್ವಾಸದ ಮೇಲೆ ಮತ ಕೇಳಬಹುದು ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಯುವಕರ ದಂಡೇ ರಾಜಕಾರಣಕ್ಕೆ ಬರುತ್ತಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುವರಿಂದ 2 ಲಕ್ಷ ರೂ.ಗಳ ಬಾಂಡ್ ಪಡೆದಿತ್ತು. ಈ ಬಾರಿ ಯಾರಿಂದಲೂ ಬಾಂಡ್ ಪಡೆದಿಲ್ಲ. ಕಾರಣ, ಅವರಿಗೆ 28 ಅಭ್ಯರ್ಥಿಗಳು ಇರಲಿಲ್ಲ. ಹೀಗಾಗಿ ಒತ್ತಾಯದಿಂದ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು 10 ವರ್ಷದಲ್ಲಿ ಭಾರತೀಯರ ಆತ್ಮಗೌರವ ಮಾತ್ರವಲ್ಲದೇ ಅನಿವಾಸಿ ಭಾರತೀಯರ ಆತ್ಮಗೌರವವನ್ನು ಹೆಚ್ಚಿಸಿದ್ದಾರೆ. ಕಿಸಾನ್ ಸಮ್ಮಾನ್, ರೈತರ ಮಕ್ಕಳ ವಿದ್ಯಾನಿಧಿ ರದ್ದು ಮಾಡಿದ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಯಶಸ್ವಿ ಬೂತ್ ನಡಿಗೆ
ಶಾಸಕರಾದ ಗುರುರಾಜ ಗಂಟಿಹೊಳೆ ಅವರ ಬೂತ್ ಕಡೆಗೆ ಸಮೃದ್ಧ ನಡಿಗೆ ಪ್ರಚಾರ ಕಾರ್ಯಕ್ರಮದ ವಿಶೇಷ ಅನುಭವ ಮತ್ತು ಚಿತ್ರಗಳನ್ನು ಒಳಗೊಂಡ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡುವ ಮೂಲಕ ಬೂತ್ ಕಡೆಗೆ ಸಮೃದ್ಧ ನಡಿಗೆ ಸಮಾರೋಪ ಗೊಂಡಿತು. ಶಾಸಕರಾದ ಗುರುರಾಜ ಗಂಟಿಹೊಳೆಯವರು ತಮ್ಮ ಅನುಭವ ಹಂಚಿಕೊಂಡರು.
ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಮಾತನಾಡಿ ಚುನಾವಣೆಯಲ್ಲಿ ಯುವ ಸಮೂಹ ಕಾರ್ಯ ಮತ್ತು ಮುಂದಿನ ಕೆಲವು ದಿನಗಳಲ್ಲಿ ಬೂತ್ ಮಟ್ಟದಲ್ಲಿ ಆಗಬೇಕಾದ ತುರ್ತು ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಉಪಾಧ್ಯಕ್ಷರಾದ ಸದಾನಂದ ಉಪ್ಪಿನಕುದ್ರು, ಶಿವಮೊಗ್ಗ ಲೋಕಸಭಾ ಚುನಾವಣಾ ಪ್ರಭಾರಿಗಳಾದ ರಘುಪತಿ ಭಟ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಸಂಧ್ಯಾ ರಮೇಶ್, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ವಿಜಯ್ ಕೊಡವೂರು, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಗಜೇಂದ್ರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

   

Related Articles

error: Content is protected !!