ಬೆಂಗಳೂರು : ಬದುಕಿನಲ್ಲಿ ಸಂಭವಿಸಿದ ಪ್ರಮುಖ ಘಟನೆಗಳನ್ನು ಸತ್ಯ ಹಾಗೂ ಪ್ರಾಮಾಣಿಕತೆಗಳಿಂದ ಸ್ಪೂರ್ತಿದಾಯಕವಾಗಿ ಓದುಗರೊಂದಿಗೆ ಹಂಚಿಕೊಳ್ಳುವುದು ಆತ್ಮಕಥೆಗಳ ಉದ್ದೇಶ. ‘ ಆಂತರಂಗದ ಸ್ವಗತ ‘ ಎಂಬ ಪಾರ್ವತಿ ಜಿ.ಐತಾಳ್ ಅವರ ಈ ಆತ್ಮಕಥನದಲ್ಲಿ ನೇರ ಮತ್ತು ಸರಳ ನಿರೂಪಣೆಯ ಸೊಗಸಿದೆ. ಬಾಲ್ಯದಿಂದ ಆರಂಭಿಸಿ ಇದುವರೆಗಿನ ಎಲ್ಲ ಮುಖ್ಯ ಘಟನೆಗಳನ್ನು ಮನಮುಟ್ಟುವ ರೀತಿಯಲ್ಲಿ ಅವರು ಹಂಚಿಕೊಂಡಿದ್ದಾರೆ ‘ ಎಂದು ಪ್ರಸಿದ್ಧ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪೂರ್ವ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಹೇಳಿದ್ದಾರೆ.
ಅವರು ಎನ್.ಆರ್.ಕಾಲನಿಯಲ್ಲಿರುವ ಬಿ.ಎಂ.ಶ್ರೀ.ಪ್ರತಿಷ್ಠಾನದ ಕಲಾಭವನದಲ್ಲಿ ಅಂಕಿತ ಪುಸ್ತಕವು ಏರ್ಪಡಿಸಿದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡುಂಡಿರಾಜ್( ಹದಿನಾಲ್ಕು ಕಿರು ನಾಟಕಗಳು) , ಪಾರ್ವತಿ ಜಿ.ಐತಾಳ್(ಅಂತರಂಗದ ಸ್ವಗತ) ಮತ್ತು ರಘುನಾಥ್ ಚ.ಹ(ಇನ್ನು ಮುಂದಿನದ್ದೆಲ್ಲ ಕಥೆ ‘ ಮತ್ತು ‘ಇಳಿಸಲಾಗದ ಶಿಲುಬೆ’) ಅವರ ಕೃತಿಗಳನ್ನು ಅನಾವರಣಗೊಳಿಸಿ ಮಾತನಾಡಿದರು. ಪತ್ರಕರ್ತ ಲೇಖಕ ಹೆಚ್.ಎಸ್.ಸತ್ಯನಾರಾಯಣ ಮತ್ತು ವಿಮರ್ಶಕ ಡಾ.ರವಿಕುಮಾರ್ ಕೃತಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಪಾರ್ವತಿ ಜಿ.ಐತಾಳ್, ಡುಂಡಿರಾಜ್ ಮತ್ತು ರಘುನಾಥ್ ಚ.ಹ.ಅವರು ತಮ್ಮ ಕೃತಿ ರಚನೆಯ ಹಿನ್ನೆಲೆಯ ಬಗ್ಗೆ ಮಾತನಾಡಿದರು. ಪ್ರಕಾಶ್ ಕಂಬತ್ತಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

