ಕುಂದಾಪುರ : ಕಸ್ತೂರಿ ರಂಗನ್ ವರದಿಯಲ್ಲಿ ತಮ್ಮ ಗ್ರಾಮಗಳನ್ನು ಸೇರಿಸಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಜಡ್ಗಲ್ ಗ್ರಾಪಂ ಹಾಗೂ ಕುಂದಾಪುರ ತಾಲೂಕಿನ ಕೆರಾಡಿ ಗ್ರಾ.ಪಂ ಸದಸ್ಯರು ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಸೋಮವಾರ ನಡೆದ ಉಪ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಜಡ್ಕಲ್ ಗ್ರಾಪಂನಲ್ಲಿ 18 ಸದಸ್ಯರು, ಕೆರಾಡಿ ಗ್ರಾಪಂನಲ್ಲಿ 14 ಸದಸ್ಯರ ಪೈಕಿ ಯಾವೊಬ್ಬ ಸದಸ್ಯನೂ ಮತಗಟ್ಟೆಯ ಹತ್ತಿರ ಸುಳಿದಿಲ್ಲ.
ಕುಂದಾಪುರ ತಾಲ್ಲೂಕಿನ ಚಿತ್ತೂರು, ಇಡೂರು ಕುಂಜ್ಞಾಡಿ, ಗೋಳಿಹೊಳೆ, ಆಲೂರು, ಎಡಮೊಗೆ, ಹೆಬ್ರಿ ಹಾಗು ಕಾರ್ಕಳ ತಾಲೂಕಿನ ಕೆಲವು ಗ್ರಾಮ ಪಂಚಾಯತ್ ಗಳಲ್ಲೂ ಕೆಲ ಸದಸ್ಯರು ಮತದಾನ ಮಾಡಿಲ್ಲ ಎಂದು ತಿಳಿದು ಬಂದಿದೆ.
ಭಾನುವಾರ ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಸಹಾಯಕ ಆಯುಕ್ತ ಮಹೇಶ್ಚಂದ್ರ ಅವರು ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ್ದ ಗ್ರಾಮ ಪಂಚಾಯತ್ ಗಳ ಸದಸ್ಯರ ಮನವೊಲಿಸಲು ಯತ್ನಿಸಿದ್ದರೂ ಫಲ ನೀಡಿಲ್ಲ.