ಬೈಂದೂರು : ಗಾಳಿ ಮಳೆಯಿಂದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಹಾನಿಯಾಗಿದೆ. ವಿದ್ಯುತ್ ಕಂಬ, ತಂತಿ ಹಾಗೂ ಟ್ರಾನ್ಸ್ ಫಾರ್ಮರ್ ಗಳಿಗೂ ಅಪಾರ ಹಾನಿಯಾಗಿದ್ದು ನಿರಂತರ ವಿದ್ಯುತ್ ವ್ಯತ್ಯಯವಾಗುತ್ತಿದೆ. ಇದನ್ನು ತುರ್ತಾಗಿ ಸರಿಪಡಿಸುವ ಕೆಲಸ ಆಗುತ್ತಿಲ್ಲ. ಇದರಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಆರೋಪಿಸಿದ್ದಾರೆ.
ಬೈಂದೂರು ಕ್ಷೇತ್ರದಲ್ಲಿ ಮೆಸ್ಕಾಂ ಸಿಬಂದಿ, ಲೈನ್ ಮ್ಯಾನ್ ಗಳ ಕೊರತೆ ಇರುವ ಬಗ್ಗೆ ಮಳೆಗಾಲ ಪೂರ್ವದಲ್ಲಿ ಮಾಹಿತಿ ನೀಡಿದ್ದರೂ ಕೊರತೆ ಸರಿದೂಗಿಸುವ ಪ್ರಯತ್ನ ನಡೆದಿಲ್ಲ.
ಮಳೆಗಾಲದಲ್ಲಿ ತುರ್ತು ಸಹಾಯಕ್ಕಾಗಿ ಪರಿಹಾರ ಕಾರ್ಯಕ್ಕೆ ಅನುಕೂಲವಾಗುವಂತೆ ಪ್ರತ್ಯೇಕ ತಂಡಗಳ ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಡಳಿತ ಹಾಗೂ ಮೆಸ್ಕಾಂ ಈ ಕೂಡಲೇ ಎಚ್ಚೆತ್ತುಕೊಂಡು ವಿದ್ಯುತ್ ವ್ಯತ್ಯಯ ತಡೆಯಲು ಹಾಗೂ ತುರ್ತು ಪರಿಹಾರ ಕಾರ್ಯಕ್ಕೆ ಪ್ರತ್ಯೇಕ ತಂಡ ನಿಯೋಜನೆ ಮಾಡಬೇಕು.
ವಿದ್ಯುತ್ ಬ್ರೇಕ್ ಡೌನ್ ಸರಿಪಡಿಸುವ ಕಾರ್ಯವೇ ಆಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೂ 15 ದಿನ ಕ್ಷೇತ್ರದ ಜನತೆ ಕತ್ತಲಲ್ಲಿ ಇರಬೇಕಾಗುತ್ತದೆ. ಈ ಕೂಡಲೇ ಜಿಲ್ಲಾಡಳಿತ ತುರ್ತು ಕ್ರಮ ತೆಗೆದುಕೊಳ್ಳಬೇಕು
ಜನರನ್ನು ಹೈರಾಣಾಗಿಸಿದ ರಾಜ್ಯ ಸರ್ಕಾರ
ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಹೆಚ್ಚಾಗುತ್ತಿದೆಯೇ ಹೊರತು ಅವರಿಂದ ಕೆಲಸ ತೆಗೆಸಿಕೊಳ್ಳುವ ಕಾರ್ಯ ಆಗುತ್ತಿಲ್ಲ. ಒಂದೆಡೆ ವಿದ್ಯುತ್ ಸಮಸ್ಯೆ, ಅದಕ್ಕೆ ಸ್ಪಂದಿಸದ ಜಿಲ್ಲಾಡಳಿತ, ಮೆಸ್ಕಾಂ. ಇನ್ನೊಂದೆಡೆ ಸಮರ್ಥ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ತಮ್ಮ ತಾಳಕ್ಕೆ ಕುಣಿಯುವ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಬೈಂದೂರು ಸೇರಿದಂತೆ ಇಡೀ ಕರಾವಳಿ ಜನರಿಗೆ ರಾಜ್ಯ ಸರ್ಕಾರ ಸಮಸ್ಯೆ ತಂದೊಡ್ಡುತ್ತಿದ್ದಾರೆ. ಸರ್ಕಾರದ ಈ ವರ್ಗಾವಣೆ ಆಟದಲ್ಲಿ ಜನರ ದೈನಂದಿನ ಸಮಸ್ಯೆ ಜೀವಂತವಾಗಿ ಉಳಿದು ಜನರು ಹೈರಾಣಾಗುತ್ತಿದ್ದಾರೆ. ಜನರ ಸಮಸ್ಯೆ ಸ್ಪಂದಿಸಲು ಅಧಿಕಾರಿಗಳೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಮತ್ತು ಎಲ್ಲ ಕಡೆಗಳಲ್ಲೂ ಹಸ್ತಕ್ಷೇಪದ ಮೂಲಕ ಅಧಿಕಾರ ಮೊಟಕುಗೊಳಿಸುವ ಕಾರ್ಯವೂ ನಡೆಯುತ್ತಿದೆ.