ಬೈಂದೂರು : ಬೈಂದೂರು ಕ್ಷೇತ್ರದಾದ್ಯಂತ ಗುರುವಾರ ಸಂಜೆ ಸುರಿದ ಬಾರಿ ಗಾಳಿಮಳೆಗೆ ಯಡ್ತರೆ ಸಮೀಪದ ಕಳವಾಡಿ ಶ್ರೀ ಮಾರಿಕಾಂಬ ದೇವಸ್ಥಾನದ ಮಾಡು ಕುಸಿದು ಬಿದ್ದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಶಾಸಕರಾದ ಗುರುರಾಜ ಗಂಟಿಹೊಳೆಯವರು ತಡರಾತ್ರಿಯೇ ದೇವಸ್ಥಾನಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ನಿರಂತರವಾಗಿ ಸುರಿದ ಮಳೆಗೆ ದೇವಸ್ಥಾನದ ಸಭಾಭವನಕ್ಕೆ ತಾಗಿಕೊಂಡು ನಿರ್ಮಿಸಿರುವ ಭೋಜನಾಲಯದ ತಗಡಿನ ಮಾಡು ಗಾಳಿ ಮಳೆಗೆ ಬಿದ್ದಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ಲಕ್ಷಾಂತರ ರೂಪಾಯಿ ವ್ಯಯಿಸಿ ಮಾಡು ನಿರ್ಮಾಣ ಮಾಡಲಾಗಿತ್ತು. ಗಾಳಿ ಮಳೆಗೆ ಕುಸಿದು ಬಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಈ ಸಂಬಂಧ ದೇವಸ್ಥಾನದ ಪ್ರಮುಖರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಹಶೀಲ್ದಾರ್ ಜೊತೆಗೂ ಶಾಸಕರು ಇದೇ ವೇಳೆ ಮಾತನಾಡಿದರು. ಯಾವ ರೀತಿಯಲ್ಲಿ ಪರಿಹಾರ ಕೊಡಿಸಬಹುದು ಎಂಬುದನ್ನು ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ
ನಂತರ ಪ್ರತಿಕ್ರಿಯಿಸಿದ ಶಾಸಕರಾದ ಗುರುರಾಜ ಗಂಟಿಹೊಳೆ ಅವರು, ಮಳೆಗಾಲದಲ್ಲಿ ಆದಷ್ಟು ಎಚ್ಚರ ವಹಿಸಬೇಕಾದ ಅಗತ್ಯವಿದೆ. ಗಾಳಿ ಮಳೆಯಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಅಗತ್ಯ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗಾಳಿ ಮಳೆಗೆ ದೇವಸ್ಥಾನದ ಮಾಡು ಕುಸಿದು ಬಿದ್ದಿದೆ. ಗ್ರಾಮೀಣ ಭಾಗದಲ್ಲಿ ಮಳೆಗಾಲದಲ್ಲಿ ಇಂತಹ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ವಿದ್ಯುತ್ ಕಂಬ, ತಂತಿಗಳು ಹಾಗೂ ದೊಡ್ಡದೊಡ್ಡ ಮರದ ಕೆಳಗೆ ಗಾಳಿ ಮಳೆ ಸಂದರ್ಭದಲ್ಲಿ ನಿಲ್ಲದೇ ಇರುವುದು ಉತ್ತಮ. ಎಷ್ಟು ಸಾಧ್ಯವೋ ಅಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಯರಾಮ್ ಶೆಟ್ಟಿ ಉಪ್ಪುಂದ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು