ಬೈಂದೂರು : ಕೊಡೇರಿ ಕಿರು ಬಂದರು ಸಮಗ್ರ ಅಭಿವೃದ್ಧಿ, ಸ್ಥಳೀಯ ಮೀನುಗಾರರ ಸಮಸ್ಯೆ, ಜಟ್ಟಿ ಹಾಗೂ ಬ್ರೇಕ್ ವಾಟರ್ ವಿಸ್ತರಣೆ, ಡ್ರೆಜ್ಜಿಂಗ್ ಸಹಿತ ಹಲವು ಸಮಸ್ಯೆಗಳು ಮತ್ತು ಅಹವಾಲು ಆಲಿಸುವ ಸಂಬಂಧ ಶಾಸಕರಾದ ಗುರುರಾಜ್ ಗಂಟಿಹೊಳೆಯವರು ಬುಧವಾರ ಕೊಡೇರಿಯ ಬಂದರು ಪ್ರದೇಶದಲ್ಲಿ ಮೀನುಗಾರರು ಮತ್ತು ಅಧಿಕಾರಿಗಳ ಸಭೆ ನಡೆಸಿದರು.
ಕೊಡೇರಿ ಕಿರು ಬಂದರು ತಾಲೂಕಿನ ಪ್ರಮುಖ ಮೀನುಗಾರಿಕ ಕೇಂದ್ರಗಳಲ್ಲಿ ಒಂದಾಗಿ ಬೆಳೆಯುತ್ತಿದೆ. ಇಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂಬ ಕೂಗು ವರ್ಷಗಳಿಂದ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕರು ಕೊಡೇರಿ ಭಾಗದ ಮೀನುಗಾರರ ಸಭೆ ಕರೆದು ಹಲವು ವಿಷಯಗಳ ಸಮಗ್ರ ಚರ್ಚೆ ನಡೆಸಿ, ಅಧಿಕಾರಿಗಳಿಗೆ ಹಲವು ನಿರ್ದೇಶನ ನೀಡಿದರು.
ಶಾಸಕರಾದ ಗುರುರಾಜ್ ಗಂಟಿಹೊಳೆ ಮಾತನಾಡಿ, ಮೀನುಗಾರಿಗೆ ಸೂಕ್ತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸೌಲಭ್ಯ ಉನ್ನತೀಕರಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು. ಡ್ರೆಜ್ಜಿಂಗ್ ಪ್ರತಿ ವರ್ಷ ಮಾಡುವಂತೆ ಆಗಬೇಕು. ಇಲ್ಲವಾದರೆ ದೋಣಿಗಳು ಹೋಗಿ ಬರಲು ಸಮಸ್ಯೆಯಾಗುತ್ತದೆ. ಹೆಚ್ಚುವರಿ ಕಾಮಗಾರಿಗೆ ಅನುದಾನದ ಲಭ್ಯತೆಯ ಬಗ್ಗೆಯೂ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ತುರ್ತು ಅಗತ್ಯತೆಗಳನ್ನು ಪೂರೈಸಬೇಕು ಎಂದು ಸೂಚಿಸಿದರು
ಅಕ್ರಮ ಜಾಲ ತಡೆಯಿರಿ
ಮೀನುಗಾರರಿಗೆ ಹಂಚಿಕೆಯಾಗುತ್ತಿರುವ ಮನೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ನಿರ್ದಿಷ್ಟ ನಿಯಮ ಮೀರಿ ಮನೆ ಹಂಚಿಕೆಯಾಗ ಕೂಡದು. ನಿರ್ದಿಷ್ಟ ಸಮಿತಿಯಿಂದ ಶಿಫಾರಸ್ಸು ಆದ ನಂತರವೇ ಹಂಚಿಕೆ ಮಾಡಬೇಕು. ಖಾಸಗಿಯಾಗಿ ಹಂಚಿಕೆ ಮಾಡುವ ಜಾಲ ಇರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು ಮತ್ತು ಇದಕ್ಕೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಮೀನುಗಾರರ ವಿವಿಧ ಬೇಡಿಕೆ
ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ 200 ಮೀಟರ್ ಜೆಟ್ಟಿ ವಿಸ್ತರಣೆ, ಪ್ರತಿ ವರ್ಷ ಬ್ರೇಕ್‌ವಾಟರ್ ನಿರ್ವಹಣೆ ಆಗಬೇಕು, ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ ಬ್ರೇಕ್ ವಾಟರ್ ಪ್ರದೇಶದಲ್ಲಿ ಇನ್ನೂ 200 ಮೀಟರ್ ಕಲ್ಲು ಹಾಕಿ ವಿಸ್ತರಿಸಬೇಕು. ಅಂದಾಜು 1.50 ಕೋಟಿ ರೂ. ವೆಚ್ಚದಲ್ಲಿ ವ್ಯವಸ್ಥಿತ ಡ್ರೆಜ್ಜಿಂಗ್ ಕಾರ್ಯ ಆಗಬೇಕು. ಬಂದರು ನಿರ್ಮಾಣದ ಮೂಲ ನಕ್ಷೆಯಲ್ಲಿ ಇರುವಂತೆ ಎಡಮಾನಿನ ಹೊಳೆಗೆ ಕೊಡೇರಿಯಲ್ಲಿ ಸೇತುವೆ ನಿರ್ಮಾಣ ಆಗಬೇಕು. ವ್ಯವಸ್ಥಿತ ಪಾರ್ಕಿಂಗ್, ಶೌಚಾಲಯ ಮತ್ತು ಡ್ರೈನೇಜ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಬಂದರು ನಿರ್ವಹಣೆಗೆ ಟೆಂಡರ್ ಕರೆಯಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಭೆಯ ಮುಂದಿಟ್ಟರು.
ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಸಂಜೀವ ಅರಕೇರಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶೋಭಾ, ಕಿರಿಯ ಅಭಿಯಂತರ ಭಾನು ಪ್ರಕಾಶ್, ಮೀನುಗಾರಿಕೆ ಸಹಾಯಕ ನಿರ್ದೇಶಕ ಭಾನುಪ್ರಕಾಶ್, ಕಿರಿಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷ ಶೇಖರ್ ಖಾರ್ವಿ, ಪ್ರಮುಖರಾದ ಟಿ. ನಾರಾಯಣ ಖಾರ್ವಿ, ಡಿ.ಚಂದ್ರಖಾರ್ವಿ, ಗ್ರಾಮ ಪಂಚಾಯತಿ ಸದಸ್ಯರು, ಸ್ಥಳೀಯ ಮೀನುಗಾರರು, ಮೀನುಗಾರ ಮುಖಂಡರು ಉಪಸ್ಥಿತರಿದ್ದರು.