ಉಪ್ಪುಂದ : ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಮೀನುಗಾರಿಕಾ ಮನೆಗಳು ಮಂಜೂರಾಗಿ ನಿಯಮ ಪ್ರಕಾರ ಹಂಚಿಕೆಯಾಗುತ್ತಿದೆ. ಬೈಂದೂರು ಕ್ಷೇತ್ರದಲ್ಲಿ ಮಾತ್ರ ಮೀನುಗಾರಿಕಾ ಮನೆಗಳು ಖಾಸಗಿಯಾಗಿ ಬಿಕರಿ ಆಗುತ್ತಿರುವ ಆರೋಪ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಸಮಗ್ರ ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆ ಚಿಂತನೆ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದಲ್ಲಿ ಉಪ್ಪುಂದದ ಕಾರ್ಯಕರ್ತ ದಲ್ಲಿ ಮೀನುಗಾರಿಕೆ ಮುಖಂಡರ ಸಭೆ ನಡೆದು, ಹೋರಾಟದ ರೂಪುರೇಷೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.
ಉಡುಪಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೂ ಮೀನುಗಾರಿಕೆ ಮನೆ ಹಂಚಿಕೆಯಾಗಿದೆ. ಆದರೆ ಬೈಂದೂರಿಗೆ ಮೀನುಗಾರಿಕೆ ಮನೆಗಳು ಬಂದಿಲ್ಲ. ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮಾಹಿತಿ ಇಲ್ಲದೇ ಕೆಲವರು ಖಾಸಗಿಯಾಗಿ ಮೀನುಗಾರಿಕಾ ಮನೆಗಳು ಕಾಳಸಂತೆಯಲ್ಲಿ ಹಂಚಿಕೆಯಾಗುತ್ತಿರುವ ದೂರುಗಳಿವೆ. ಕೇಳಿದರೆ ಸಚಿವರ ಕೋಟ ಎನ್ನುವುದು ಕೇಳಿ ಬರುತ್ತದೆ. ಇದೊಂದು ದೊಡ್ಡ ಜಾಲ, ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡು ಸಮಗ್ರ ತನಿಖೆ ನಡೆಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ
ಕನಿಷ್ಠ 500 ಮನೆ ಒದಗಿಸಲಿ
ಮನೆ ಹಂಚಿಕೆ ಹರಣದ ಸಮಗ್ರ ತನಿಖೆ ಆಗಬೇಕು ಮತ್ತು ಬೈಂದೂರು ಕ್ಷೇತ್ರಕ್ಕೆ ಕನಿಷ್ಠ 500 ಮೀನಿಗಾರಿಕಾ ಮನೆಯನ್ನು ತಕ್ಷಣವೇ ಮಂಜೂರು ಮಾಡಬೇಕು ಎಂದು ಒತ್ತಾಯಿಸುವ ನಿಟ್ಟಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ನಿಮಿತ್ತ ಪೂರ್ವಭಾವಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ.
ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ತಲಾ 250 ಮನೆಗಳು ಹಂಚಿಕೆಯಾಗಿದೆ. ಆದರೆ ಬೈಂದೂರಿಗೆ ಮಾತ್ರ ಮನೆ ಹಂಚಿಕೆ ಆಗದೇ ಖಾಸಗಿಯಾ ಬಿಕರಿಯಾಗುತ್ತದೆ ಎಂಬ ಆರೋಪ ಎಲ್ಲೆಡೆಯಿಂದ ಕೇಳಿ ಬರುತ್ತುದ್ದು, ಇದರ ಸಮಗ್ರ ತನಿಖೆಗೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.
ಬಂದರುಗಳ ಅಭಿವೃದ್ಧಿಗಿಯೂ ಹೋರಾಟ
ಮರವಂತೆ ಬಂದರು, ಗಂಗೊಳ್ಳಿ ಬಂದರು ಪ್ರದೇಶದಲ್ಲಿ ಜಟ್ಟಿ, ಕೊಡೇರಿ ಕಿರು ಬಂದರು ಪ್ರದೇಶದಲ್ಲಿ ಬ್ರೇಕ್ ವಾಟರ್ ಕಾಮಗಾರಿ ವಿಸ್ತರಣೆ, ಶಿರೂರು ಬ್ರೇಕ್ ವಾಟರ್ ಅಭಿವೃದ್ಧಿ ಸಹಿತ 16 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸುದೀರ್ಘ ಹೋರಾಟ ರೂಪಿಸಲು ಮೀನುಗಾರಿಕೆ ಮುಖಂಡರೊಂದಿಗೆ ಚಿಂತನೆ, ಮಾತುಕತೆ ನಡೆಯಿತು. ಕ್ಷೇತ್ರದ ವಿವಿಧ ಭಾಗದ ಮೀನುಗಾರಿಕೆ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.