ಬೈಂದೂರು : 94ಸಿ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ವಿಲೇವಾರಿಗೆ ಬಾಕಿ ಇರುವ ಸಮಸ್ಯಾತ್ಮಕವಲ್ಲದ ಅರ್ಜಿಗಳಿಗೆ ಕೂಡಲೇ ಹಕ್ಕು ಪತ್ರ ಮಂಜೂರು ಮಾಡಿ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೈಂದೂರು ತಾಲೂಕು ಕಚೇರಿಯಲ್ಲಿ ಬೈಂದೂರು ಅಕ್ರಮ ಸಕ್ರಮ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ನಡೆಸಿದ ಶಾಸಕರು, ಅರ್ಜಿಗಳನ್ನು ಆನ್ ಲೈನ್ ನಲ್ಲಿ ಅಪ್ಲೋಡ್ ಮಾಡುವ ಸಮಯದಲ್ಲಿ ಎದುರಾಗಿದ್ದ ತಾಂತ್ರಿಕ ಸಮಸ್ಯೆಗಳನ್ನು ರಾಜ್ಯ ಹಂತದ ಸಂಬಂಧಪಟ್ಟವರಿಗೆ ಫೋನ್ ಕರೆ ಮೂಲಕ ಗಮನಕ್ಕೆ ತಂದು ತಾಂತ್ರಿಕ ಸಮಸ್ಯೆ ಸರಿ ಪಡಿಸಲು ಅಧಿಕಾರಿಗೆ ನಿರ್ದೇಶಿಸಿದರು.
ಮೇಲಾಧಿಕಾರಿಗಳಿಗೆ ಕರೆ
ಅದರಂತೆ ತಾಲೂಕು ಮಟ್ಟದ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಕರೆ ಮಾಡಿ ತಾಂತ್ರಿಕ ಸಮಸ್ಯೆ ನಿವಾರಣೆ ಆಗಿದೆ ಎಂದರು.
ಪೂರ್ವಭಾವಿ ಸಭೆ
ಸಮಿತಿ ಮುಂದೆ ಅಂತಿಮವಾಗಿ ಹಾಜರು ಪಡಿಸಲು ಹಾಗೂ ಜನವರಿ 2 ನೇ ವಾರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಬಗರ್ ಹುಕುಂ ಕಡತ ವಿಲೇವಾರಿ ಸಪ್ತಾಹ ಸಲುವಾಗಿ ಬಾಕಿ ಇರುವ ಕಡತಗಳ ಬಗ್ಗೆ ಸಂಬಂದಿಸಿದ ಅಧಿಕಾರಿಗಳ ಜತೆಗೆ ಪೂರ್ವಭಾವಿ ಚರ್ಚೆ ನಡೆಸಿದರು.
94ಸಿ ಅಡಿ ಅರ್ಹ ಅರ್ಜಿಗಳು ವಿಲೇವಾರಿ ಬಾಕಿ ಇರುವ ಗ್ರಾಮಗಳಲ್ಲಿ ಸಮಸ್ಯಾತ್ಮಕವಲ್ಲದ ಅರ್ಜಿಗಳಿಗೆ ಕೂಡಲೇ ಹಕ್ಕು ಪತ್ರ ಮಂಜೂರು ಮಾಡಬೇಕು. ಈ ಮೂಲಕ ಬಡವರಿಗೆ ಭೂಮಿಯ ಹಕ್ಕು ಪತ್ರ ಒದಗಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು. ತಾಲೂಕು ತಹಸೀಲ್ದಾರರು, ಉಪ ತಹಸೀಲ್ದಾರರು, ಬಗರ್ ಹುಕುಂ ತಂತ್ರಾಂಶದ ಜಿಲ್ಲಾ ಸಮಾಲೋಚಕರು, ಗ್ರಾಮ ಆಡಳಿತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.