ಬೈಂದೂರು : ಸರ್ಕಾರಿ ಶಾಲೆಗಳ ಬಿಸಿಯೂಟ ನೌಕರರಿಗೆ ಕನಿಷ್ಠ (3700)ಗೌರವ ಧನ ನೀಡುತ್ತಿದ್ದು,ರಜೆ ನೀಡುವುದಿಲ್ಲ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ವಿಶೇಷ ಗೌರವಧನ ಕೂಡ ನೀಡುವುದಿಲ್ಲ. ಹೀಗಾಗಿ ಬಿಸಿಯೂಟ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶನಿವಾರ ಬೈಂದೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಟನೆ ನಡೆಸಿದರು. ರಜಾ ದಿನದ ಕೆಲಸಕ್ಕೆ ವಿಶೇಷ ಗೌರವಧನ ನೀಡಬೇಕು. ಅನಿವಾರ್ಯ ಸಂದರ್ಭದಲ್ಲಿ ರಜೆ ಪಡೆಯಲು ಅವಕಾಶ ನೀಡಬೇಕು ಮತ್ತು ಆ ದಿನದ ವೇತನ ಕಡಿತ ಮಾಡಬಾರದು, ಪಿಎಫ್ಐ, ಇಎಸ್ಐ ಸಹಿತ ವಿವಿಧ ಸೌಲಭ್ಯ ಒದಗಿಸಬೇಕು. ಮಾಸಿಕ ಗೌರವಧನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಬೈಂದೂರು ತಾಲೂಕು ಬಿಸಿಯೂಟ ನೌಕರರು ಪ್ರತಿಭಟನೆ ನಡೆಸಿದರು. ಪ್ರತಿಭಟನ ಸ್ಥಳಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ, ಬಿಸಿಯೂಟ ನೌಕರರ ಎಲ್ಲ ಬೇಡಿಕೆಗಳನ್ನು ಆಲಿಸಿ, ಅವರಿಂದ ಮನವಿ ಸ್ವೀಕರಿಸಿದರು. ಸ್ಥಳದಿಂದಲೇ ಮೇಲಾಧಿಕಾರಿಗಳಿಗೆ ಕರೆ ಮಾಡಿ, ಬಿಸಿಯೂಟ ನೌಕರರ ಸಮಸ್ಯೆಗೆ ಪರಿಹಾರ ನೀಡುವ ಸಂಬಂಧ ಸೂಚನೆ ನೀಡಿದರು. ನಂತರ ಮಾತನಾಡಿ, ಬಿಸಿಯೂಟ ನೌಕರರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಅವರೊಂದಿಗೆ ಸದಾ ನಿಲ್ಲುತ್ತೇನೆ. ನಿಮ್ಮ ಬೇಡಿಕೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ನಿಮ್ಮ ಎಲ್ಲ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು. ನೌಕರರ ನೋವಿಗೆ ಸ್ಪಂದಿಸಿ ಶಾಸಕರು ಸಮಯೋಚಿತವಾಗಿ ಸಾಂತ್ವಾನದ ಮಾತುಗಳನ್ನು ಆಡಿದರು, ಹಾಗೂ ಅವರ ಮನವಿಯನ್ನು ಸ್ವೀಕರಿಸಿದರು.