ಬೈಂದೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರದ ಆಡಳಿತ ಪೂರ್ಣ ವೈಫಲ್ಯದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದರಿಂದಾಗಿ ಹಿಂದೂ ಸಮಾಜದ ಮುಖಂಡರನ್ನು ಅನವಶ್ಯಕವಾಗಿ ಗುರಿಯಾಗಿ ಕಿರುಕುಳು ನೀಡುವ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಸುಳ್ಳು ಕೇಸ್ ದಾಖಲಿಸಿ ದಮನಿಸಲು ಹೊರಟಿದೆ. ಈ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಎಂದು ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಆಗ್ರಹಿಸಿದ್ದಾರೆ.
ಹಿಂದೂ ಮುಖಂಡರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ರವರ ಮೇಲೆ ಎಫ್ ಐ ಆರ್ ದಾಖಲಿಸಿ, ಅರುಣ್ ಕುಮಾರ್ ಪುತ್ತಿಲ ಸೇರಿ 20ಕ್ಕೂ ಅಧಿಕ ಹಿಂದು ಸಂಘಟನೆ ಮುಖಂಡರನ್ನು ಗಡೀಪಾರು ಮಾಡಲು ನೋಟಿಸ್ ಜಾರಿ ಮಾಡಿದ್ದು, ಹಿಂದೂ ಕಾರ್ಯಕರ್ತರ ಮನೆಗೆ ರಾತೋರಾತ್ರಿ ಪೊಲೀಸರು ಹೋಗಿ ಅವರ ಮಾನಸಿಕ ಸ್ಥೈರ್ಯ ಕುಗ್ಗಿಸಲು ಮುಂದಾಗಿರುವುದು ಖಂಡನೀಯ.
ಮಂಗಳೂರಿನಲ್ಲಿ ನಡೆದ ಸರಣಿ ಕೊಲೆಗಳು ರಾಜ್ಯ ಸರ್ಕಾರದ ದುರಾಡಳಿತವನ್ನು ಸೂಚಿಸುತ್ತದೆ. ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಮುಸಲ್ಮಾನ ಮತದಾರರು ಆಕ್ರೋಶಗೊಂಡಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ಹಿಂದೂ ಸಂಘಟಕರ ಮೇಲೆ ಸಕಾರಣವಿಲ್ಲದೆ ಪ್ರಕರಣ ದಾಖಲಿಸುತ್ತಿರುವುದು ಖಂಡನೀಯ.
ಎಸ್‌ಡಿಪಿಐ, ಕಾಂಗ್ರೆಸ್ ನಾಯಕರು ಒತ್ತಡ ಹೇರಿದ ಪರಿಣಾಮವಾಗಿ ಎರಡು ಮೂರು ವಾರಗಳ ಹಿಂದಿನ ಭಾಷಣಗಳನ್ನು ಉಲ್ಲೇಖಿಸಿ ಎಫ್‌ಐಆರ್ ದಾಖಲಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ಓಲೈಕೆಯ ರಾಜಕೀಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾತ್ರೋರಾತ್ರಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮನೆಗೆ ನುಗ್ಗಿ, ಪ್ರಕರಣ ದಾಖಲಿಸುತ್ತಿರುವುದನ್ನು ಹಿಂದೂ ಸಮಾಜ ವಿರೋಧಿಸುತ್ತದೆ. ಕಾಂಗ್ರೆಸ್ಸಿನ ಅಜೆಂಡಾಗಳನ್ನು ಪೊಲೀಸ್ ಇಲಾಖೆಯ ಮೂಲಕ ಜಾರಿಗೊಳಿಸುವುದು ಸಂವಿಧಾನಕ್ಕೆ ಮಾಡುವ ಅವಮಾನವಾಗಿದೆ.
ಮತಾಂಧ ಶಕ್ತಿಗಳ ಓಲೈಕೆಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ತಮ್ಮ ಕೈಗೊಂಬೆಯನ್ನಾಗಿಸಿಕೊಂಡು ಹಿಂದೂ ಕಾರ್ಯಕರ್ತರನ್ನು ದಮನಿಸಲು ಮುಂದಾಗಿದೆ.
ಕಾಂಗ್ರೆಸ್ ಸರ್ಕಾರ ತಕ್ಷಣ ತನ್ನ ಈ ಹಿಂದೂ ವಿರೋಧಿ ನಿಲುವು ಹಾಗೂ ಹಿಂದೂ ಕಾರ್ಯಕರ್ತರನ್ನು ದಮನಿಸುವ ಪ್ರಯತ್ನವನ್ನು ಕೈಬಿಟ್ಟು, ಕರಾವಳಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

