ಉಡುಪಿ: ಜಿಲ್ಲೆಯ ಕೆಲವು ಗ್ರಾಮ ಪಂಚಾಯತ್ ಹಾಗೂ ಉಡುಪಿ ಮತ್ತು ಬೈಂದೂರು ಸ್ಥಳೀಯಾಡಳಿತ ವ್ಯಾಪ್ತಿಯ ಕೆಲವು ಕಡೆ ಈ ಬಾರಿ ನೀರಿನ ಸಮಸ್ಯೆ ತಲೆದೋರಿದ್ದು ಅಲ್ಲಿಗೆ ನೀರು ಪೂರೈಕೆಗೆ ಅಗತ್ಯ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಹಾಗೂ ಮಳೆಗಾಲದ ಸಿದ್ಧತೆ ಕುರಿತ ಸಂವಾದದಲ್ಲಿ ಮಾತನಾಡುತಿದ್ದರು.
ಬ್ರಹ್ಮಾವರ, ಬೈಂದೂರು, ಪೆರ್ಡೂರು ಗ್ರಾ.ಪಂ.ಗಳ ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಕುಂದಾಪುರ ಉಪ ವಿಭಾಗಾಧಿಕಾರಿಗಳ ನೇತೃತ್ವದ ಕಾರ್ಯಪಡೆಯಲ್ಲಿ ತೀರ್ಮಾನ ತೆಗೆದುಕೊಂಡು ಈ ಪ್ರದೇಶಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಮೇ 4 ರಿಂದ ರೇಷನಿಂಗ್ ವ್ಯವಸ್ಥೆ ಆರಂಭಿಸಲಾಗಿದೆ. ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ 10 ವಾರ್ಡ್‌ಗಳಿಗೆ ಟ್ಯಾಂಕರ್ ನೀರು ನೀಡಲಾಗುತ್ತಿದೆ ಎಂದರು.
ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ನಗರಸಭೆ ಪೌರಾಯುಕ್ತ ರಾಯಪ್ಪವಾರ್ತಾಧಿಕಾರಿ ಮಂಜುನಾಥ್ ಡಿಎಚ್‌ಒ ಡಾ.ಐ.ಪಿ. ಗಡಾದ, ಡಾ. ಪ್ರಶಾಂತ್ ಭಟ್, ಮಂಜನಬೈಲು, ಅಜಿತ್ ಆರಾಡಿ ಇದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಝೀರ್ ಪೊಲ್ಯ ಸ್ವಾಗತಿಸಿದರು. ಉಮೇಶ್ ಮಾರ್ಪಳ್ಳಿ ವಂದಿಸಿದರು. ರಹಿಂ ಉಜಿರೆ ನಿರೂಪಿಸಿದರು