ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನಿರೀಕ್ಷೆಯಂತೆ ವಕೀಲ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪುಜಾರಿ ಆಪ್ತ ಪದ್ಮರಾಜ್ ಆರ್. ಅವರಿಗೆ ಟಿಕೆಟ್ ದೊರೆತಿದೆ.
ಹಿಂದುತ್ವದ ಪ್ರಬಲ ಪ್ರಭಾವ ಇರುವ ಈ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಇಳಿಯಲು ತೀರ ಪೈಪೋಟಿಯೇನೂ ಇರಲಿಲ್ಲ. ಪಕ್ಷ ಸೂಚನೆ ನೀಡಿದರೆ ಮಾತ್ರ ಸ್ಪರ್ಧಿಸುವ ಇರಾದೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಇದ್ದರೆ, ಇನ್ನೋರ್ವ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕೂಡ ಆಕಾಂಕ್ಷಿಯಾಗಿದ್ದರು. ಆದರೆ ತೀರ ಲಾಬಿಗಿಳಿದು ಟಿಕೆಟ್ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿಲ್ಲ. ಆರಂಭದಿಂದಲೂ ಪದ್ಮರಾಜ್ ಹೆಸರು ಮುಂಚೂಣಿಯಲ್ಲಿತ್ತು. ಜಿಲ್ಲೆಯ ನಾಯಕರು ಕೂಡ ಬೆಂಬಲಿಸಿದ್ದರು. ಹಾಗಾಗಿ ನಿರೀಕ್ಷೆಯಂತೆ ಪದ್ಮರಾಜ್ ಅವರನ್ನು ಕೈ ಹೈಕಮಾಂಡ್ ಅಂತಿಮಗೊಳಿಸಿದೆ.
ವಕೀಲರಾಗಿ ಪರಿಚಿತರಾಗಿರುವ ಪದ್ಮರಾಜ್, ಕಿರಿಯ ವಯಸ್ಸಿನಲ್ಲೇ ಕುದ್ರೋಳಿ ಕ್ಷೇತ್ರದ ಜವಾಬ್ದಾರಿ ವಹಿಸಿಕೊಂಡವರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಎಂಬ ಪುಟ್ಟ ಗ್ರಾಮದಲ್ಲಿ ಮಂಗಳೂರು ಮೂಲದ ಎಚ್.ಎಂ.ರಾಮಯ್ಯ ಮತ್ತು ಲಲಿತಾ ದಂಪತಿಯ ದ್ವಿತೀಯ ಪುತ್ರನಾಗಿದ್ದಾರೆ