ಮಂಗಳೂರು: ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ಹಾರ ತುರಾಯಿ ಚೆಂಡೆ ವಾದ್ಯಗಳ ಜೊತೆ ಭರ್ಜರಿಯಾಗಿ ಬರಮಾಡಿಕೊಂಡರು.
ಗುರುವಾರ ರಾತ್ರಿ ಪದ್ಮರಾಜ್ ಅವರಿಗೆ ಟಿಕೆಟ್ ಘೋಷಣೆಯಾಗಿತ್ತು. ಶುಕ್ರವಾರ ಬೆಳಗ್ಗೆ ಬೆಂಗಳೂರಿನಿಂದ ಮಂಗಳೂರಿಗೆ ಮರಳಿದ ಪದ್ಮರಾಜ್ ಅವರು ಕಾರ್ಯಕರ್ತರು ಮತ್ತು ಬೆಂಬಲಿಗರ ಸಂಭ್ರಮದಲ್ಲಿ ಜೊತೆಯಾದರು.
ಬಳಿಕ ಆಧುನಿಕ ಮಂಗಳೂರು ಶಿಲ್ಪಿ ಉಳ್ಳಾಲ ಶ್ರೀನಿವಾಸ್ ಮಲ್ಯರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು. ಕದ್ರಿಯ ವೀರ ಯೋಧರ ಸ್ಮಾರಕ್ಕೆ ತೆರಳಿ ದೇಶಕ್ಕಾಗಿ ಮಡಿದ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಬಳಿಕ ಎಂ.ಜಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರಾಷ್ಟ್ರಪಿತ, ಮಂಗಳೂರು ಪುರಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಗೌರವ, ಬಾವುಡಗುಡ್ಡೆಯಲ್ಲಿ ಹಿರಿಯ ಸ್ವಾತಂತ್ರೃ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ನಮನ ಸಲ್ಲಿಸಿ, ಟಾಗೋರ್ ಪಾರ್ಕ್‌ನಲ್ಲಿ ರವೀಂದ್ರನಾಥ ಟಾಗೋರ್ ಪ್ರತಿಮೆಗೆ ನಮನ ಸಲ್ಲಿಸಿದರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ಹೈಕಮಾಂಡ್ ನಾಯಕರಿಗೆ ಮತ್ತು ತನ್ನನ್ನು ಬೆಂಬಲಿಸಿದ ರಾಜ್ಯ ನಾಯಕರು ಮತ್ತು ಜಿಲ್ಲಾ ನಾಯಕರಿಗೆ ಧನ್ಯವಾದ ಸಲ್ಲಿಸಿದರು. ತನ್ನ ರಾಜಕೀಯ ಗುರುಗಳಾದ ಜನಾರ್ದನ ಪೂಜಾರಿಯವರ ಹಾದಿಯಲ್ಲಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಜಕಾರಣ ಮಾಡುವುದಾಗಿ ತಿಳಿಸಿದರು. ತುಳುನಾಡಿನ ಸಮಗ್ರ ಅಭಿವೃದ್ಧಿ ಜತೆಗೆ ಸೌಹಾರ್ದ ಪರಂಪರೆಯನ್ನು ಮರಳಿ ಕಟ್ಟುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಗತವೈಭವ ಮರುಕಳಿಸುವಂತೆ ಮಾಡುವುದು ನನ್ನ ಉದ್ದೇಶ ಎಂದು ಅವರು ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾಪೋರೇಟರ್‌ಗಳು, ಮಾಜಿ ಕಾಪೋರೇಟರ್‌ಗಳು ಇದ್ದರು.