ಕುಂದಾಪುರ: ಜ್ವರ ಕಡಿಮೆಯಾಗಲೆಂದು ವೈದ್ಯರು ನೀಡಿದ ಇಂಜೆಕ್ಷನ್ ಅಡ್ಡ ಪರಿಣಾಮದಿಂದ ಯುವಕನೋರ್ವ ಮೃತಪಟ್ಟ ಘಟನೆ ಬೆಂಗಳೂರು ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕುಂದಾಪುರದ ಹೊಸಂಗಡಿ ಬೆದ್ರಳ್ಳಿ ನಿವಾಸಿ ದಿ. ಚಂದ್ರ ಶೆಟ್ಟಿ ಎಂಬುವವರ ಪುತ್ರ ಅಮರ್ ಶೆಟ್ಟಿ (31) ಎಂದು ಗುರುತಿಸಲಾಗಿದೆ. ದುಬೈನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಅಮರ್ ಶೆಟ್ಟಿ ಒಂದು ವರ್ಷದ ಹಿಂದಷ್ಟೇ ಊರಿಗೆ ಹಿಂದಿರುಗಿ ಬೆಂಗಳೂರಿನಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದರು. ಆ.13ರಂದು ಕೆ.ಪಿ. ಅಗ್ರಹಾರದ ಸಂಬಂಧಿಯ ಮನೆಗೆ ತೆರಳಿದ್ದಾಗ ಮೈ ಬಿಸಿ ಇರುವುದನ್ನು ಗಮನಿಸಿ ಅಲ್ಲಿಯೇ ಸಮೀಪವಿದ್ದ ಭಾಗ್ಯ ಕ್ಲಿನಿಕ್ ಗೆ ತೆರಳಿದ್ದು ವೈದ್ಯರು ಪರೀಕ್ಷಿಸಿ ಜ್ವರವೆಂದು ಇಂಜೆಕ್ಷನ್ ಹಾಗೂ ಮಾತ್ರೆಗಳನ್ನು ನೀಡಿದ್ದರು. ಆದರೆ ಇಂಜೆಕ್ಷನ್ ನೀಡಿದ ಭಾಗ ಇದ್ದಕ್ಕಿದ್ದಂತೆ ಊದಿಕೊಂಡು, ನೋವು ಕಾಣಿಸಿಕೊಂಡಿದೆ.
ಹಾಗಾಗಿ ಆಗಸ್ಟ 15ರಂದು ರಾಜಾಜಿನಗರದ ಖಾಸಗಿ ಕ್ಲಿನಿಕ್ ಗೆ ತೆರಳಿದ್ದಾರೆ. ವೈದ್ಯರು ಪರೀಕ್ಷಿಸಿ ಮಾತ್ರೆ ಹಾಗೂ ಗ್ಲೂಕೋಸ್ ನೀಡಿದ್ದರು. ಒಂದು ದಿನದ ಬಳಿಕ ನೋವು ಕಡಿಮೆಯಾಗದಿದ್ದರೆ ಚಿಕಿತ್ಸೆ ನೀಡುವುದಾಗಿ ಹೇಳಿ ಕಳುಹಿಸಿದ್ದರು. ಆದಾಗ್ಯೂ ನೋವು ಕಡಿಮೆಯಾಗದೇ ಇದ್ದುದರಿಂದ ಆ.16ರಂದು ಕೀಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.ಅಲ್ಲಿ ಪರೀಕ್ಷಿಸಿದಾಗ ವೈದ್ಯರು ಇಂಜೆಕ್ಷನ್ ಅಡ್ಡ ಪರಿಣಾಮದಿಂದಿಂದ ಮಲ್ಟಿ ಆರ್ಗನ್ ಡಿಸ್ ಫಂಕ್ಷನ್ ಆಗಿದೆ ಎಂದು ವೈದ್ಯರು ಕುಟುಂಬಿಕರಿಗೆ ತಿಳಿಸಿದ್ದಾರೆ. ಅ.18ರ ಸಂಜೆ ಅಮರ್ ಶೆಟ್ಟಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.