ಮೈಸೂರು: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಹಿರಿಯ ಸಂಸದ, ರಾಜಕೀಯ ಮುತ್ಸದ್ವಿ ದಲಿತ ನಾಯಕ ವಿ. ಶ್ರೀನಿವಾಸ ಪ್ರಸಾದ್ (76 ವರ್ಷ) ಸೋಮವಾರ ಬೆಂಗಳೂರಿನಲ್ಲಿ ನಿಧನರಾದರು.
ಕೆಲ ದಿನಗಳ ಹಿಂದೆ ಕಾಲು ನೋವು, ಮೂತ್ರಪಿಂಡ ಸೋಂಕು ಸೇರಿದಂತೆ ಇತರ ರೋಗ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀನಿವಾಸ ಪ್ರಸಾದ್ ಅವರು ಬೆಳಗಿನ ಜಾವ 1.29ರ ಸಮಯದಲ್ಲಿ ಕೊನೆಯುಸಿರೆಳೆದರು. ಶ್ರೀನಿವಾಸ ಪ್ರಸಾದ್ ಅವರು, ಪತ್ನಿ ಭಾಗ್ಯಲಕ್ಷ್ಮಿ, ಮೂವರು ಪುತ್ರಿಯರಾದ ಪ್ರತಿಮಾ, ಪೂರ್ಣಿಮಾ, ಪೂನಂ, ಅಳಿಯಂದಿರಾದ ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್, ಡಾ.ಮೋಹನ್ ಅವರನ್ನು ಅಗಲಿದ್ದಾರೆ
ಇಂದು ಅಂತ್ಯಕ್ರಿಯೆ
ಶ್ರೀನಿವಾಸ್ ಪ್ರಸಾದ್ ಅವರು ಬೌದ್ಧ ಧರ್ಮ ಅನುಯಾಯಿಯಾಗಿದ್ದರು. ಹಾಗಾಗಿ ಬೌದ್ಧ ಧರ್ಮದ ವಿಧಿ ವಿಧಾನದಂತೆ ಮಂಗಳವಾರ (ಏ.30) ಅಂತ್ಯಕ್ರಿಯೆ ನಡೆಯಲಿದೆ ಎಂದು ಪುತ್ರಿ ಪ್ರತಿಮಾ ಪ್ರಸಾದ್ ತಿಳಿಸಿದ್ದಾರೆ