ಉಡುಪಿ : ಬೆಂಗಳೂರಿನ ಭಂಡಾರಕೇರಿ ಮಠಾಧೀಶರ ದಿವ್ಯಾನುಗ್ರಹದೊಂದಿಗೆ ಶುಕ್ರವಾರ ಸಂಜೆ ನಡೆಯುತ್ತಿದ್ದ ಸರಣಿ ಪ್ರವಚನ ಮಾಲಿಕೆಯಲ್ಲಿ ಶ್ರೀರಾಮ ನಿರ್ಯಾಣದ ವಿಷಯದಲ್ಲಿ ಪ್ರವಚನಗೈದ ಬಳಿಕ ಅಲ್ಲೇ ಕುಸಿದು ಅಸ್ವಸ್ಥಗೊಂಡಿದ್ದ ದೈತ ಸಿದ್ಧಾಂತ ವಿದ್ವಾಂಸ, ಪ್ರಚವನಕಾರ, ಉಡುಪಿ ಶ್ರೀಕೃಷ್ಣ ಮಠದ ಅಷ್ಟಮಠಗಳ ಆಸ್ಥಾನ ವಿದ್ವಾಂಸರೂ ಆಗಿದ್ದ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯ (72ವರ್ಷ) ಶನಿವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಉಡುಪಿಯ ಸಂಸ್ಕೃತ ಮಹಾ ವಿದ್ಯಾಲಯದಲ್ಲಿ ಸುದೀರ್ಘ ಅವಧಿಯ ದೈತ ವೇದಾಂತ ಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇತ್ತೀಚೆಗಷ್ಟೆ ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಸಂಪನ್ನಗೊಂಡ ಮಂಡಲೋತ್ಸವದಲ್ಲೂ ಭಾಗವಹಿಸಿ ಅಷ್ಠಾವಧಾನ ಸೇವೆಗೈದಿದ್ದರು. ಮೃತರು ಪತ್ನಿ ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯ ವೃಂದ, ಅಭಿಮಾನಿಗಳನ್ನು ಅಗಲಿದ್ದಾರೆ
ಗಣ್ಯರಿಂದ ಸಂತಾಪ :
ಉಪಾಧ್ಯಾಯರ ನಿಧನಕ್ಕೆ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು, ಪಲಿಮಾರು ಶ್ರೀ ವಿದ್ಯಾಧೀಶತೀರ್ಥರು, ಅದಮಾರು ge ವಿಶ್ವಪ್ರಿಯತೀರ್ಥರು, ಶ್ರೀ ಈಶ ಪ್ರಿಯತೀರ್ಥರು, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥರು, ಸೋದೆ ಶ್ರೀ ವಿಶ್ವವಲ್ಲಭ ತೀರ್ಥರು, ಶೀರೂರು ಶ್ರೀ ವೇದವರ್ಧನ ತೀರ್ಥರು, ಮಂತ್ರಾಲಯ, ಭಂಡಾರಕೇರಿ, ಚಿತ್ರಾಪುರ ಶ್ರೀಗಳು, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ, ಯುವಬ್ರಾಹ್ಮಣ ಪರಿಷತ್, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ, ತುಳು ಶಿವಳ್ಳಿ ಬ್ರಾಹಣ ಮಹಾಮಂಡಲ, ಉಡುಪಿ ಪುರೋಹಿತರ ಸಂಘ, ಸಂಸ್ಕೃತ ಮಹಾವಿದ್ಯಾಲಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಮಾಜಿ ಶಾಸಕ ಕೆ. ರಘುಪತಿ ಭಟ್, ಶಾಸಕ ಯಶ್‌ಪಾಲ್ ಸುವರ್ಣ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.