Home » ಧರಣಿ ಕೂರಲು ಜಿಲ್ಲೆಯ 5 ಶಾಸಕರ ನಿರ್ಧಾರ
 

ಧರಣಿ ಕೂರಲು ಜಿಲ್ಲೆಯ 5 ಶಾಸಕರ ನಿರ್ಧಾರ

ಸಿಎಂ ಸಿದ್ದರಾಮಯ್ಯರಿಂದ ಕರಾವಳಿ ನಿರ್ಲಕ್ಷ್ಯ

by Kundapur Xpress
Spread the love

ಉಡುಪಿ : ಕರಾವಳಿಯ 3 ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಬಿಡಿಗಾಸು ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ. ಮುಂದಿನ ಹತ್ತು ದಿನದೊಳಗೆ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡದೇ ಇದ್ದಲ್ಲಿ ಕರಾವಳಿಯ ಮೂರು ಜಿಲ್ಲೆಯ ಬಿಜೆಪಿಯ ಶಾಸಕರು ಸಿಎಂ ಮನೆ ಮುಂದೆ ಧರಣಿ ಕೂರುತ್ತೇವೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಅವರು ಸೋಮವಾರ ಉಡುಪಿಯ ಖಾಸಗಿ ಹೋಟೆಲಿನಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಐವರು ಶಾಸಕರು ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಜನಹಿತವನ್ನು ಸಂಪೂರ್ಣವಾಗಿ ಮರೆತಿರುವ ಸರಕಾರ, ಕರಾವಳಿಯ ಮೂರು ಜಿಲ್ಲೆಗಳನ್ನು ಕಡೆಗಣಿಸುತ್ತಿದೆ. ಬಿಜೆಪಿ ಶಾಸಕರೇ ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಈ ಜಿಲ್ಲೆಗಳನ್ನು ನಿರ್ಲಕ್ಷ್ಯ ಮಾಡಲಾಗುತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಕಳೆದ ವರ್ಷ ಜಿಲ್ಲೆಗೆ ಆಗಮಿಸಿ ತ್ರೈಮಾಸಿಕ ಸಭೆ ನಡೆಸಿದ ಸಿಎಂ, ಆ ಸಭೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾಲುಸಂಕ ನಿರ್ಮಾಣಕ್ಕೆ 50 ಕೋಟಿ ರೂ. ಅನುದಾನ ಮೀಸಲಿಡುವ ಭರವಸೆ ನೀಡಿದ್ದರು. ಆದರೆ ಇದುವರೆಗೆ ಸಿಎಂ ಭಾಗಿಯಾಗಿದ್ದ ಸಭೆಯಲ್ಲಿ ನಿರ್ಣಯಗೊಂಡ ಯಾವೆಲ್ಲಾ ಯೋಜನೆಗಳು ಅನುಷ್ಠಾನವಾಗಿದೆ ಎಂಬುದನ್ನು ಉತ್ತರಿಸಲಿ ಎಂದರು.

ಉಡುಪಿಯಲ್ಲಿ ಸಭೆ ನಡೆಸಿ ಪ್ರಚಾರ ಗಿಟ್ಟಿಸಿಕೊಂಡ ಸಿಎಂ, ಜಿಲ್ಲೆಯ ಮಳೆ ಹಾನಿ, ಬೆಳೆ ಹಾನಿ, ರಸ್ತೆ ದುರಸ್ತಿ, ಅಂಗನವಾಡಿ, ಶಾಲೆಗಳ ರಿಪೇರಿಗೆ ಹಣ ಬಿಡುಗಡೆ ಮಾಡಿಲ್ಲ. ಈ ವರ್ಷದ ಮಳೆಗೆ ಉಡುಪಿ ಜಿಲ್ಲೆಯಲ್ಲಿ 240 ಕೋಟಿ ರೂ. ಹಾನಿಯಾಗಿದೆ ಎಂದು ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ವರದಿ ನೀಡಿದೆ. ಆದರೂ ಹಣ ಬಿಡುಗಡೆಯಾಗಿಲ್ಲ. ಪ್ಯಾಚ್ ವರ್ಕ್, ಕಡಲ್ಗೊರೆತಗಳಿಗೆ ಹಣವನ್ನು ಬಿಡುಗಡೆ ಮಾಡಿ, ಹೊಸ ರಸ್ತೆಯ ಬಗ್ಗೆ ಈಗ ಪ್ರಶ್ನಿಸುವುದಿಲ್ಲ ಎಂದರು.

ಎರಡು ಬಜೆಟ್‌ನಲ್ಲಿ ಕರಾವಳಿಯ ಜಿಲ್ಲೆಗಳಿಗೆ ಯಾವ ಮಹತ್ತರ ಯೋಜನೆಗಳನ್ನು ಘೋಷಿಸಿಲ್ಲ. ಸರಕಾರ ದಿವಾಳಿಯಾಗಿದೆಯೋ ಅಥವಾ ಕರಾವಳಿ ಜಿಲ್ಲೆಯ ನಿರ್ಲಕ್ಷ್ಯವೋ ಎಂಬ ಬಗ್ಗೆ ಸರಕಾರವೇ ಸ್ಪಷ್ಟನೆ ನೀಡಬೇಕು. ಹತ್ತು ದಿನಗಳೊಳಗೆ ಅನುದಾನವನ್ನು ಬಿಡುಗಡೆ ಮಾಡಬೇಕು. ಇದಕ್ಕೆ ಸಿಎಂ ಉತ್ತರಿಸದೇ ಇದ್ದಲ್ಲಿ ಕರಾವಳಿಯಲ್ಲಿ ಜನಾಂದೋಲನ ಆರಂಭವಾಗುತ್ತದೆ ಎಂದವರು ಕಿಡಿಕಾರಿದರು.

ಜಿಲ್ಲೆಯಲ್ಲಿ ನಿರಂತರವಾಗಿ ತಾಲೂಕು ಮಟ್ಟದ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ. ಜನರಿಂದ ಆಯ್ಕೆಯಾದ ಜನಪ್ರತಿ ನಿಧಿಗಳು ಆಡಳಿತ ನಡೆಸಬೇಕು. ಆದರೆ ಪ್ರಸ್ತುತ ಜಿಲ್ಲೆಯಲ್ಲಿ ಕಾಂಗ್ರೆಸಿನ ಕಾರ್ಯಕರ್ತರೇ ಆಡಳಿತ ನಡೆಸುತ್ತಿದ್ದಾರೆ. ಅಧಿಕಾರಿಗಳು ಕಾರ್ಯ ಕರ್ತರ ಮಾತನ್ನು ಕೇಳುವ ಪರಿಸ್ಥಿತಿ ಎದುರಾಗಿರುವುದು ಖೇದಕರ ಎಂದರು. ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಹೊಂದಿಸಲು ಹಾಲು, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ, ಅಬಕಾರಿ ಸುಂಕ ಹೆಚ್ಚಳ, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ತೆರಿಗೆ ಹೆಚ್ಚಳ ಮಾಡಿ ಜನರನ್ನು ಶೋಷಣೆಗೆ ಒಳಪಡಿಸುತ್ತಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಬೆಲೆ ಏರಿಕೆಯ ಪರ್ವ ನಡೆಯುತ್ತಿದೆ ಎಂದು ಟೀಕಿಸಿದರು.

   

Related Articles

error: Content is protected !!