ಉಡುಪಿ : ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ! ಧನಂಜಯ ಸರ್ಜಿ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಎಸ್. ಎಲ್. ಭೋಜೇಗೌಡ ಅವರು ಅತ್ಯದ್ಭುತ ಜಯವನ್ನು ದಾಖಲಿಸಿದ್ದಾರೆ. ಈ ಐತಿಹಾಸಿಕ ಗೆಲುವಿಗೆ ಶ್ರಮಿಸಿದ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಮತದಾರರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸದೃಢ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಶ್ರಮದಿಂದ ಯಾವುದೇ ಚುನಾವಣೆಯಲ್ಲಿ ನಿರಾಯಾಸ ಗೆಲುವು ಸಾಧ್ಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು. ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಮಾಧ್ಯಮ ವರದಿಗಾರರನ್ನುದ್ದೇಶಿಸಿ ಮಾತನಾಡಿದರು.
ಯಾವುದೇ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ, ಪ್ರಾಬಲ್ಯವನ್ನು ಹೊಂದಿದ್ದರೂ ಕೂಡ ಪಕ್ಷವನ್ನು ಮೀರಿ ನಿಲ್ಲಲು ಸಾಧ್ಯವಿಲ್ಲ ಎಂಬ ಸ್ಪಷ್ಟವಾದ ಒಂದು ಸಂದೇಶವನ್ನು ಈ ಚುನಾವಣೆ ಕೊಟ್ಟಿದೆ. ನೈರುತ್ಯ ಪದವೀಧರ ಕ್ಷೇತ್ರದ ಕಣದಲ್ಲಿ ಸ್ಥಳೀಯರಾದ ಮಾಜಿ ಶಾಸಕ ರಘುಪತಿ ಭಟ್ ಸ್ಪರ್ಧೆ ಮಾಡಿದ್ದರು. ಪ್ರಾರಂಭದಲ್ಲಿ ಸಣ್ಣ ಮಟ್ಟಿನ ಆತಂಕ ಕೂಡಾ ಇತ್ತು. ಆದರೆ ಫಲಿತಾಂಶ ಬಂದ ಮೇಲೆ ಯಾವ ಬಂಡಾಯಗಳು ಕೂಡಾ ಇಲ್ಲಿ ನಿಲ್ಲುವುದಿಲ್ಲ ಎಂಬುದು ಸ್ಪಷ್ಟಗೊಂಡಿದೆ. ಪಕ್ಷ ಸಂಘಟನೆ ಮತ್ತು ನಿಷ್ಠಾವಂತ ಕಾರ್ಯಕರ್ತರು ಸದೃಢವಾಗಿರುವುದರಿಂದ ಯಾವುದೇ ಕಠಿಣ ಚುನಾವಣೆಯನ್ನು ಕೂಡ ನಾವು ನಿರಾಯಾಸವಾಗಿ ಗೆಲ್ಲುತ್ತೇವೆ ಎಂಬ ಸಂದೇಶ ಹೋಗಿದೆ. ಆದುದರಿಂದ ಅವಕಾಶ ಸಿಗಲಿಲ್ಲ ಎಂದೋ ಅಥವಾ ಯಾವುದೇ ಕಾರಣಕ್ಕೆ ಬಂಡಾಯ ಏಳುತ್ತೇವೆ ಎನ್ನುವ ಮನಸ್ಥಿತಿ ಹೊಂದಿದವರಿಗೆ ಪ್ರಸಕ್ತ ಚುನಾವಣಾ ಫಲಿತಾಂಶ ಒಂದು ಒಳ್ಳೆಯ ಸಂದೇಶ ನೀಡಿದೆ. ಹಾಗಾಗಿ ಇನ್ನು ಮುಂದೆ ಯಾರೂ ಕೂಡಾ ಪಕ್ಷದ ನಿಲುವಿಗೆ ವಿರುದ್ಧವಾಗಿ ತಮ್ಮ ನಡೆಯನ್ನು ತೋರಿಸಬಾರದು ಎನ್ನುವ ವಿನಂತಿಯನ್ನು ಮಾಡುತ್ತಾ, ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅದ್ಭುತ ಗೆಲುವನ್ನು ಸಾಧಿಸಿರುವ ಡಾ! ಧನಂಜಯ ಸರ್ಜಿ ಮತ್ತು ಎಸ್. ಎಲ್. ಭೋಜೇಗೌಡ ಅವರಿಗೆ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ವಕ್ತಾರ ವಿಜಯ ಕುಮಾರ್ ಉದ್ಯಾವರ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಪ್ರಮುಖರಾದ ಶೈಲೇಂದ್ರ ಶೆಟ್ಟಿ, ಸುಭಾಷಿತ್ ಕುಮಾರ್, ಚಿನ್ಮಯಮೂರ್ತಿ ಮತ್ತಿತರರು ಉಪಸ್ಥಿತರಿದ್ದರು