ಉಡುಪಿ : ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲೆದೋರಿರುವ ಮೂಲಭೂತ ಸಮಸ್ಯೆಯೊಂದರ ಪರಿಹಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೊರ್ಚಾದ ಜಿಲ್ಲಾ ಕಾರ್ಯಕಾರಣಿ ಸದಸ್ಯ ಕಿರಣ್ ಪಿಂಟೋ ಹಾಗೂ ಇತರರ ಮೇಲೆ ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಡಿ. ನಾಯ್ಕ್ ಅವರು ಜಾತಿ ನಿಂದನೆಯ ದೂರು ನೀಡಿದ್ದು, ಈ ದೂರು ಸಂಪೂರ್ಣವಾಗಿ ಸುಳ್ಳಾಗಿದೆ ಎಂದು ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿಸೋಜ ತಿಳಿಸಿದ್ದಾರೆ.
ಈ ಕುರಿತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿರುವ ಅವರು, ಕಿರಣ್ ಪಿಂಟೋರವರನ್ನು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕಾರಣಿ ಸದಸ್ಯ ಸ್ಥಾನದಿಂದ ಕೆಳಗಿಳಿಸಲು ಹಾಗೂ ತನ್ನ ಮೇಲೆ ನೀಡಿದ ದೂರಿನ ಬಗ್ಗೆ ರಕ್ಷಣೆಗಾಗಿ ಇತರರ ಮೇಲೆ ಶೋಭಾ ಡಿ. ನಾಯ್ಕ್ ಅವರು ಜೂ.29ರಂದು ಸುಳ್ಳು ದೂರು ನೀಡಿರುತ್ತಾರೆ ಎಂದು ರುಡಾಲ್ಫ್ ಡಿಸೋಜ ತಿಳಿಸಿದ್ದಾರೆ.
ಇತ್ತೀಚಿಗೆ ನಡೆದ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಡಿ. ನಾಯ್ಕ್ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲವೆಂಬ ವಿಷಯವನ್ನು ಪ್ರಸ್ತಾವಿಸಿ 13 ಮಂದಿ ಗ್ರಾಮ ಪಂಚಾಯತ್ ಸದಸ್ಯರು ಜೂ.27ರಂದು ಜಿಲ್ಲಾಧಿಕಾರಿಗಳಿಗೆ ದೂರನ್ನು ನೀಡಿರುತ್ತಾರೆ. ಈ ಕುರಿತು ಜೂ.28ರಂದು ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಡಿ. ನಾಯ್ಕ್ ಅವರನ್ನು ತರಾಟೆಗೆ ತೆಗೆದುಕೊಂಡ ಪರಿಣಾಮವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅವರು ಸಮಸ್ಯೆಯನ್ನು ಕೂಡಲೇ ಬಗೆಹರಿಸಿಕೊಡುವುದಾಗಿ ಹೇಳಿರುತ್ತಾರೆ.
ಬಳಿಕ ಜೂ.29ರಂದು ಅವರ ಮೇಲೆ ನೀಡಿರುವ ದೂರಿಗೆ ಪ್ರತಿ ದೂರಾಗಿ ಕಿರಣ್ ಪಿಂಟೋ ಹಾಗೂ ಇತರರ ಮೇಲೆ ಜಾತಿ ನಿಂದನೆಯ ಸುಳ್ಳು ದೂರು ದಾಖಲು ಮಾಡಿ ಜಾತಿ ನಿಂದನೆಯ ಕಾನೂನನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ.
ಆದುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಡಿ. ನಾಯ್ಕ್ ಅವರು ನೀಡಿರುವ ದೂರನ್ನು ಯಾರ ಒತ್ತಡಕ್ಕೂ ಮಣಿಯದೇ ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿರುವುದಾಗಿ ರುಡಾಲ್ಫ್ ಡಿಸೋಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ನವೀನ್ ಡಿಸೋಜ, ಜಾನ್ಸನ್ ಡಿಸೋಜ, ಒಲಿವರ್ ಡಿಸೋಜ ಮತ್ತು ಅನಿಲ್ ಅಂಬಲಪಾಡಿ ಉಪಸ್ಥಿತರಿದ್ದರು.