ಉಡುಪಿ : ಬಿಜೆಪಿ ಸದಸ್ಯತಾ ಅಭಿಯಾನದ ಬಳಿಕ ಪಕ್ಷದ ಕಾರ್ಯ ಪದ್ಧತಿಯಂತೆ ಬೂತ್ ಮಟ್ಟದಿಂದ ರಾಷ್ಟ್ರ ಮಟ್ಟದ ವರೆಗೆ ನಡೆಯುವ ಸಂಘಟನಾ ಪರ್ವವನ್ನು ಜಿಲ್ಲೆಯಾದ್ಯಂತ ಸಶಕ್ತ ಬೂತ್ ಸಮಿತಿಗಳ ರಚನೆ ಮೂಲಕ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಕರೆ ನೀಡಿದರು. ಅವರು ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು ಹಾಗೂ ಬೂತ್ ಅಧ್ಯಕ್ಷರಾಗಿ ನಿಯೋಜನೆಗೊಳ್ಳುವ ಕಾರ್ಯಕರ್ತರು ಪಕ್ಷದ ಸಕ್ರಿಯ ಸದಸ್ಯತ್ವವನ್ನು ಪಡೆದಿರಬೇಕು. ಬೂತ್ ಸಮಿತಿಗೆ ಆಯ್ಕೆಯಾಗುವ ಎಲ್ಲಾ ಸದಸ್ಯರು ಪಕ್ಷದ ಸದಸ್ಯತನವನ್ನು ಹೊಂದಿರಬೇಕು. ಮಂಡಲಗಳಿಂದ ನೇಮಿಸಲ್ಪಟ್ಟ ಸಹಯೋಗಿಗಳು ಪ್ರತೀ ಬೂತ್ ಮಟ್ಟದಲ್ಲಿ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿ ಶಾಸಕರ ಉಪಸ್ಥಿತಿಯಲ್ಲಿ ಪರಿಣಾಮಕಾರಿ ಸಭೆ ನಡೆಸಿ, ನಿಗದಿತ ಮಾನದಂಡದಂತೆ ಸದೃಢ ಬೂತ್ ಸಮಿತಿಯನ್ನು ರಚಿಸಿ ವಿವರಗಳನ್ನು 1 ವಾರದೊಳಗೆ ಬಿಜೆಪಿ ಜಿಲ್ಲಾ ಕಛೇರಿಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆ ಮತ್ತು ಆಕ್ರಮಣಗಳನ್ನು ಖಂಡಿಸಿ, ಉಡುಪಿ ಜಿಲ್ಲಾ ಹಿಂದೂ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಡಿ.4ರಂದು ಮಧ್ಯಾಹ್ನ ಗಂಟೆ 3.00ಕ್ಕೆ ಉಡುಪಿ ಜೋಡುಕಟ್ಟೆಯಿಂದ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಸ್ಥಳದ ವರೆಗೆ ನಡೆಯುವ ‘ಜಾಥಾ ಮತ್ತು ಜನಾಂದೋಲನ ಸಭೆ’ಗೆ ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಸಮಿತಿ ಸದಸ್ಯರು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಜನಾಂದೋಲನವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಪಕ್ಷದ ಸಂಘಟನಾ ಪರ್ವದ ಜಿಲ್ಲಾ ಚುನಾವಣಾಧಿಕಾರಿ ರವಿಶಂಕರ್ ಮಿಜಾರ್ ಮಾತನಾಡಿ, ಪಕ್ಷದ ಸಂಘಟನಾ ಪರ್ವದ ಮಹತ್ವವನ್ನು ವಿವರಿಸಿ, ಬೂತ್ ಸಮಿತಿ ರಚನೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಪ್ರಮುಖ ಅಂಶಗಳ ಕುರಿತು ವಿಸ್ತ್ರತ ಮಾಹಿತಿ ನೀಡಿದರು.
ನ.26ರಿಂದ ಜ.26ರ ವರೆಗೆ ಜಿಲ್ಲೆಯಾದ್ಯಂತ ನಡೆಯಲಿರುವ ಸಂವಿಧಾನ ಸಮ್ಮಾನ್ ಕಾರ್ಯಕ್ರಮದ ಕುರಿತು ಅಭಿಯಾನದ ಜಿಲ್ಲಾ ಸಹ ಸಂಚಾಲಕ ಉಮೇಶ್ ಎ. ನಾಯ್ಕ್ ಮಾಹಿತಿ ನೀಡಿದರು.
ಇತ್ತೀಚೆಗೆ ನಿಧನರಾದ ಪಕ್ಷದ ಹಿರಿಯ ಮುಖಂಡ ಮಾಧವ ಸುವರ್ಣ ಎರ್ಮಾಳು ಮತ್ತು ಮಹಿಳಾ ಮೋರ್ಚಾದ ಹಿರಿಯ ನಾಯಕಿ ಕಿರಣ್ ಕಾಮತ್ ಕಡಿಯಾಳಿ ಅವರ ಸೇವೆಯನ್ನು ನೆನೆದು ಪಕ್ಷದ ವತಿಯಿಂದ ಶೃದ್ದಾಂಜಲಿ ಸಮರ್ಪಿಸಲಾಯಿತು