ಉಡುಪಿ : ಅಧಿಕಾರಿಗಳ ಸರಣಿ ಆತ್ಮಹತ್ಯೆ, ಬಾಣಂತಿಯರು ಮತ್ತು ನವಜಾತ ಶಿಶುಗಳ ಸಾವು ಖಂಡಿಸಿ, ರಾಜ್ಯ ಸರಕಾರದ ವಿರುದ್ಧ ತನಿಖೆಗೆ ಅಗ್ರಹಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಕೆ
ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಜನತೆಗೆ ಆತ್ಮಹತ್ಯೆ ಮತ್ತು ಹತ್ಯೆ ಭಾಗ್ಯವನ್ನು ನೀಡಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಆರೋಪಿಸಿದೆ.
ರಾಜ್ಯ ಕಾಂಗ್ರೆಸ್ ಸರಕಾರ ಕಳೆದ 19 ತಿಂಗಳಲ್ಲಿ 6 ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯವನ್ನು ಕರುಣಿಸಿದೆ. ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಕರ್ನಾಟಕದಲ್ಲಿ 700ಕ್ಕೂ ಹೆಚ್ಚು ಬಾಣಂತಿಯರ ಸಾವು ಸಂಭವಿಸಿದೆ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ 1,100ಕ್ಕೂ ಹೆಚ್ಚು ನವಜಾತ ಶಿಶುಗಳ ಸಾವಿಗೆ ಕಾರಣವಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಕೂಲಂಕುಷ ತನಿಖೆಯನ್ನು ನಡೆಸಿ ತಪ್ಪಿತಸ್ಥರನ್ನು ಕಾನೂನಾತ್ಮಕ ಶಿಕ್ಷೆಗೆ ಗುರಿಪಡಿಸಬೇಕು ಎಂದು ರಾಜ್ಯಪಾಲರನ್ನು ಅಗ್ರಹಿಸುವ ಮನವಿಯನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯೆ ಶ್ಯಾಮಲಾ ಎಸ್. ಕುಂದರ್, ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ! ವಿದ್ಯಾದರ ಶೆಟ್ಟಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಸುಜಾಲ ಸತೀಶ್, ಸುಮಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ನಳಿನಿ ಪ್ರದೀಪ್ ರಾವ್, ಅನಿತಾ ಆರ್.ಕೆ., ಕಾರ್ಯದರ್ಶಿ ವಿದ್ಯಾ ಶ್ಯಾಮಸುಂದರ್, ಉಡುಪಿ ನಗರ ಅಧ್ಯಕ್ಷೆ ನೀತಾ ಪ್ರಭು, ಗ್ರಾಮಾoತರ ಅಧ್ಯಕ್ಷೆ ರಮ್ಯಾ ರಾವ್, ಕಾಪು ಪ್ರಧಾನ ಕಾರ್ಯದರ್ಶಿಗಳಾದ ಶಶಿಪ್ರಭಾ, ಸಂಧ್ಯಾ ಕಾಮತ್, ಎಸ್.ಟಿ. ಮೋರ್ಚಾ ಉಡುಪಿ ನಗರಾಧ್ಯಕ್ಷೆ ಸುಮಾ ನಾಯ್ಕ್, ಪ್ರಧಾನ ಕಾರ್ಯದರ್ಶಿ, ಸುಗುಣಾ ನಾಯ್ಕ್, ಪ್ರಮುಖರಾದ ಸುಧಾ ಪೈ, ಯಶೋಧ ರಾಜೇಂದ್ರ, ಗೀತಾ ಶೇರಿಗಾರ್, ಉಷಾ, ಸುಮಾ ದೊಡ್ಡಣಗುಡ್ಡೆ, ಕವಿತಾ, ಶಿಲ್ಪಾ ಕೋಟ್ಯಾನ್, ಪ್ರೀತಿ ಕೊಡವೂರು, ಉಷಾ ಹಾಲಾಡಿ, ಚಂದ್ರಿಕಾ ಸಹಿತ ಮಹಿಳಾ ಮೋರ್ಚಾ ಜಿಲ್ಲಾ ಮತ್ತು ಮಂಡಲಗಳ ಪದಾಧಿಕಾರಿಗಳು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಮನವಿಯಲ್ಲಿ ಈ ಕೆಳಗಿನ ಪ್ರಮುಖ ವಿಚಾರಗಳನ್ನು ಉಲ್ಲೇಖಿಸಲಾಗಿದೆ:
* ಬಾಣಂತಿಯರ ಸಾವಿಗೆ ಇಲಾಖೆಗಳ ವ್ಯಾಪಕ ಭ್ರಷ್ಟಾಚಾರ, ಕಮಿಷನ್ ಧoದೆ, ಕಳಪೆ ಔಷಧಗಳು ಹಾಗೂ ಕಳಪೆ ವೈದ್ಯಕೀಯ ಸಾಮಗ್ರಿಗಳ ಪೂರೈಕೆ ಕಾರಣವಾಗಿದೆ.
* ಬಾಣಂತಿಯರು ಹಾಗೂ ಹಸುಗೂಸುಗಳಿಗಾಗಿ ಕೇಂದ್ರ ಸರ್ಕಾರದ ಮಾತೃ ವಂದನ, ಇಂದ್ರ ಧನುಷ್ ಮುಂತಾದ ಯೋಜನೆಗಳನ್ನು ರಾಜ್ಯ ಸರ್ಕಾರ ಸರಿಯಾಗಿ ತಲುಪಿಸುತ್ತಿಲ್ಲ. ಕೇಂದ್ರ ಸರಕಾರ ಈ ಯೋಜನೆಗಳಿಗೆ ನೀಡುವ ಅನುದಾನದ ದುರ್ಬಳಕೆ ನಡೆಯುತ್ತಿದೆ.
* RL FLUID OR RINGER LACTATE SOLU3TION: ರಿಂಗರ್ ಲಾಕ್ಟೇಟ್ ದ್ರಾವಣದ ಎಲ್ಲಾ ಬ್ಯಾಚುಗಳನ್ನು ಟೆಸ್ಟ್ ಮಾಡದೆ ಕೇವಲ ರಾಂಡಮ್ (Random) ಆಗಿ ಒಂದೆರಡು ಟೆಸ್ಟ್ ಮಾಡಿ ಕಳುಹಿಸಲಾಗುತ್ತಿದೆ. ಸರ್ಕಾರದ ನಿರ್ಲಕ್ಷ ಹಾಗೂ ಬೇಜವಾಬ್ದಾರಿತನ ಇದರಲ್ಲಿ ಕಂಡು ಬರುತ್ತದೆ. ಇದು ಬಾಣಂತಿಯರ ಸಾವಿಗೆ ಮತ್ತೊಂದು ಕಾರಣವಾಗಿದೆ.
* ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿರುವ ಬಾಣಂತಿಯರ ವ್ಯಾಪಕ ಸಾವಿನ ಹಿನ್ನೆಲೆಯಲ್ಲಿ ಈಗಾಗಲೇ ಕರ್ನಾಟಕ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ದಿನಾಂಕ 16.12.2024ರಂದು ಬೆಂಗಳೂರು ಸುವರ್ಣ ಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದು, ಬಂಧನಕ್ಕೂ ಒಳಗಾಗಿ ಅನೇಕ ಬೇಡಿಕೆಗಳಿಗಾಗಿ ಒತ್ತಾಯಿಸಿರುತ್ತದೆ. ಸದನದ ಒಳಗೆ ಪ್ರತಿಪಕ್ಷವಾಗಿ ಬಿಜೆಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈಫಲ್ಯಗಳ ಮೇಲೆ ಅನೇಕ ದಿನಗಳ ಚರ್ಚೆ ನಡೆಸಿತ್ತು. ನಂತರವೂ ಬಾಣಂತಿಯರ ಸಾವು ಮುಂದುವರೆದಿದೆ.
ಈ ಘಟನೆಗಳನ್ನು ಖಂಡಿಸಿ, ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಈ ಕೆಳಕಂಡ ಬೇಡಿಕೆಗಳಿಗೆ ಆಗ್ರಹಿಸಿದೆ:
1. ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ ಬಾಣಂತಿಯರಿಗೆ ರೂ.25 ಲಕ್ಷ ಪರಿಹಾರ ನೀಡಲು ಒತ್ತಾಯ.
2. ಸಾವನ್ನಪ್ಪಿದ ಬಾಣಂತಿಯರ ಅನಾಥ ಮಕ್ಕಳ ಭವಿಷ್ಯ ರೂಪಿಸಲು ಕರ್ನಾಟಕ ಸರ್ಕಾರ ಆ ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕು. ಇದಕ್ಕಾಗಿ ಕೂಡಲೇ ಸರ್ಕಾರ ನಿಯಮವನ್ನು ರೂಪಿಸಬೇಕು (ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಭದ್ರತೆಯನ್ನು ಒದಗಿಸಬೇಕು. ಹಾಗೂ ಇದನ್ನು ಖಾತ್ರಿಪಡಿಸಲು ಮೇಲ್ವಿಚಾರಣೆ ಸಮಿತಿಯನ್ನು ರಚಿಸಬೇಕು).
3. ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ವ್ಯಾಪಕ ಸಾವುಗಳನ್ನು ತಡೆಯಲು ವಿಫಲರಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಕ್ಷಣ ರಾಜೀನಾಮೆ ನೀಡಬೇಕು.
4. ಬಾಣಂತಿಯರ ಸಾವಿಗೆ ನೈಜ ಕಾರಣಗಳನ್ನು ತಿಳಿದು ಅದನ್ನು ನಿಯಂತ್ರಿಸಲು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯನ್ನು ನಡೆಸಬೇಕು.
5. ಬಳ್ಳಾರಿ, ಬೆಳಗಾವಿ, ತಿಪಟೂರು, ಬೆಂಗಳೂರು, ಕೊಪ್ಪಳ, ರಾಯಚೂರು, ಕಲ್ಬುರ್ಗಿಯಿಂದ ಬರುತ್ತಿರುವ ವರದಿಗಳ ಪ್ರಕಾರ ಈ ಸಾವುಗಳಿಗೆ ಕಾರಣವೇನೆಂದರೆ, ಸರ್ಕಾರ ಬಳಸುತ್ತಿರುವ ಕಳಪೆ ಗುಣಮಟ್ಟದ ಔಷಧಿಗಳು. (ಉದಾಹರಣೆಗೆ ರಿಂಗರ್ ಲಾಕ್ಟೇಟ್ ದ್ರಾವಣ). ಇದಕ್ಕೆಲ್ಲ ಮುಖ್ಯ ಕಾರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ.
6. ಗರ್ಭಿಣಿ ಸ್ತ್ರೀಯರ ಆರೈಕೆಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. (ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಪ್ರಧಾನಮಂತ್ರಿ ಸುರಕ್ಷಿತ್ ಮಾತ್ರತ್ವ ಅಭಿಯಾನ, ಸುರಕ್ಷಿತ್ ಮಾತ್ರತ್ವ ಆಶ್ವಾಸನ್, ಲಕ್ಷ್ಯ, ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ, ಅನಿಮಿಯ ಮುಕ್ತ ಭಾರತ, ಮದರ್ ಅಂಡ್ ಚೈಲ್ಡ್ ಪ್ರೊಟೆಕ್ಷನ್ ಕಾರ್ಡ್, ಪೋಶಣ್ ಅಭಿಯಾನ್, ರಾಷ್ಟ್ರೀಯ ಬಾಲ್ ಸ್ವಾಸ್ಥ್ಯ ಕಾರ್ಯಕ್ರಮ, ಇತ್ಯಾದಿ)
7. ಬಾಣಂತಿಯರಿಗೆ ಪೋಷಣ್ ಅಭಿಯಾನ್, ಜನನಿ ಸುರಕ್ಷಾ ಯೋಜನೆ, ಆಹಾರದ ಕಿಟ್, ಕ್ಯಾಲ್ಸಿಯಂ, ಪ್ರೊಟೀನ್, ಕಬ್ಬಿಣದಂತಹ ಸಾಮಾಗ್ರಿಗಳನ್ನು ನೀಡುವುದು, ನಿಯಮಿತ ತಪಾಸಣೆ ನಡೆಸುವುದು ಹಾಗೂ ಮಾತೃ ವಂದನ ಯೋಜನೆಯ ಹಣ ತಲುಪಿಸುವುದರಲ್ಲಿ ರಾಜ್ಯ ಸರ್ಕಾರದ ಈ ಎರಡು ಇಲಾಖೆಗಳು ವಿಫಲವಾಗಿವೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯ.
8. ಕರ್ನಾಟಕ ರಾಜ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯವಸ್ಥೆ ಸರ್ಕಾರದ ಹೊಣೆಗೇಡಿತನದಿಂದ ಸಂಪೂರ್ಣ ಹದಗೆಟ್ಟಿದೆ. ಸಿಬ್ಬಂದಿಗಳ ಕೊರತೆಯಿಂದ PHCಗಳು ಸೊರಗುತ್ತಿವೆ. ಅಂಬುಲೆನ್ಸ್ ಗಳಿಗೆ ಸರಿಯಾಗಿ ಡೀಸೆಲ್ ಸಿಗುತ್ತಿಲ್ಲ, ಅಂಬುಲೆನ್ಸ್ ಡ್ರೈವರ್ ಗಳಿಗೆ ಸರ್ಕಾರ ಸಂಬಳ ನೀಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್, ಐಸಿಯು, ಬ್ಲಡ್ ಬ್ಯಾಂಕ್ ಕೊರತೆ ಇದೆ. ಸರ್ಕಾರ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಯನ್ನು ಪರಿಶೀಲಿಸಿ ಸುವ್ಯವಸ್ಥಿತಗೊಳಿಸಬೇಕು. ಹಾಗೂ ಮೇಲ್ದರ್ಜೆಗೇರಿಸಬೇಕು.