ಮಂಗಳೂರು : ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯ ಹೆಚ್ಚುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಕಡೆಗಣಿಸಿದೆ. ಹತ್ಯೆ – ಆತ್ಮಹತ್ಯೆಗಳೇ ಈ ಸರ್ಕಾರದ ಹೆಗ್ಗುರುತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೆಡೆ ವಾಲ್ಮೀಕಿ ಹಗರಣ, ಮುಡಾ ಹಗರಣ, ಅಧಿಕಾರಿಗಳ ಆತ್ಮಹತ್ಯೆ ಇವೆಲ್ಲವೂ ಸರ್ಕಾರದ ಸ್ಥಿತಿಯನ್ನು ಬಟಾಬಯಲು ಮಾಡಿದೆ. ಈ ಮಧ್ಯೆ ಆಡಳಿತ ನಡೆಸುವವರು ದುರಂಹಕಾರ-ದುರ್ವತ್ರನೆಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಯ ಸಂದರ್ಭ ‘ಮೊಹಬತ್ ದುಖಾನ್’ ಹೇಳಿಕೆ ನೀಡಿದವರು ಈಗ ರಾಜ್ಯವನ್ನು ಹತ್ಯಾ-ಆತ್ಮಹತ್ಯೆ ದುಖಾನ್ ಮಾಡಿದ್ದಾರೆ. ಕಟಾ-ಕಟ್ ಹೇಳಿಕೆ ನೀಡಿದವರು ವಾಲ್ಮೀಕಿ ನಿಗಮದ ಹಣ ನುಂಗಿ ಹಾಕಿದ್ದಾರೆ. ಎಸ್‌ಪಿ-ಎಸ್‌ಟಿ ಹಣವನ್ನು ಗ್ಯಾರಂಟಿಗೆ ವರ್ಗಾಯಿಸಿದ್ದಾರೆ. ದುರಾಡಳಿತ-ಭ್ರಷ್ಟಾಚಾರದಲ್ಲಿ ರಾಜ್ಯ ಸರ್ಕಾರ ಮುಳುಗಿದೆ ಎಂದರು.