ಕೋಟ : ಕೇಂದ್ರ ಲಲಿತ ಕಲಾ ಅಕಾಡೆಮಿಯಿಂದ ರಾಷ್ಟ್ರಪ್ರಶಸ್ತಿ’ ಪುರಸ್ಕೃತರಾದ ಕೋಟ ಹಂದಟ್ಟಿನ ಎಚ್.ಜಿ. ಗಣೇಶ್ ಉರಾಳರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ‘ಆಧುನಿಕ ಭಾರತೀಯ ಶಿಲ್ಪ ಕಲೆಯಲ್ಲಿ ಅಭಿವ್ಯಕ್ತಿತ ಗ್ರಾಮ್ಯ ರೂಪಾಕಾರಗಳ ಪುನರಭಿವ್ಯಕ್ತಿ’ ಎಂಬ ವಿಷಯದ ಪಿ.ಎಚ್.ಡಿ. ಪ್ರೌಢ ಪ್ರಬಂಧಕ್ಕೆ ಶಿಲ್ಪಕಲಾ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಕೋಟದ ಯಕ್ಷಗಾನ ಮತ್ತು ನಾಟಕ ಪ್ರಸಾಧನ ತಜ್ಞ ಎಚ್. ಗೋವಿಂದ ಉರಾಳ ಮತ್ತು ನಾಗರತ್ನ ದಂಪತಿಗಳ ಪುತ್ರರಾದ ಇವರು ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯಲ್ಲಿ ‘ಸ್ವರ್ಣ ಪದಕ’ದೊಂದಿಗೆ ಶಿಲ್ಪ ಕಲಾ ಸ್ನಾತಕ ಪದವಿಯನ್ನು ಪಡೆದಿದ್ದೂ, ಮುಂದೆ ಗುಜರಾತಿನ ವಡೋದರಾದ ‘ದಿ ಮಹಾರಾಜ ಸಯಾಜಿ ರಾವ್ ವಿಶ್ವ ವಿದ್ಯಾನಿಲಯ’ ದಲ್ಲಿ ಶಿಲ್ಪ ಕಲಾ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಇದೀಗ ಮಣಿಪಾಲದ ಮಾಹೆಯಲ್ಲಿ ‘ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್’ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಂಭವಿ ಗಿಳಿಯಾರು ಶಾಲೆ, ವಿವೇಕ ವಿದ್ಯಾಸಂಸ್ಥೆಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಪಿ.ಯು ವಿದ್ಯಾಭ್ಯಾಸವನ್ನು ಮುಗಿಸಿರುವ ಗಣೇಶ್ ಉರಾಳರು ದೇಶದ ಶಿಲ್ಪ ಕಲಾ ವಿಭಾಗದ ಅಪರೂಪದ ಅನನ್ಯ ಕಲಾವಿದರೂ, ಶಿಕ್ಷಕರೂ ಆಗಿ ಗುರುತಿಸಿಕೊಂಡಿದ್ದಾರೆ.