ಮತ ಚಲಾಯಿಸಿ, ಸಂಭ್ರಮ ಪಡಿ: ಸಿಇಒ ಡಾ. ಕುಮಾರ್
ಮಂಗಳೂರು: ಮಹಾನ್ ಚಿಂತಕರಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಮರಣೆ ಇಂದಿನ ಅಗತ್ಯ, ಸಂವಿಧಾನ ಶಿಲ್ಪಿಗಳು ಭಾರತೀಯ ಪ್ರಜೆಗಳಿಗೆ ನೀಡಿರುವ ಮತದಾನದ ಹಕ್ಕನ್ನು ಅರ್ಹರೆಲ್ಲರೂ ಚಲಾವಣೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಗಳೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಅಭಿಪ್ರಾಯ ಪಟ್ಟರು. ಅವರು ಏ.14ರ ಶುಕ್ರವಾರ ನಗರದ ಪಿವಿಎಸ್ ವೃತ್ತದ ಬಳಿ ಇರುವ ಮೌರಿಷ್ಠ ಅಪಾರ್ಟ್ಮೆಂಟ್ನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮತದಾನದ ಜಾಗೃತಿಗಾಗಿ ಹಮ್ಮಿಕೊಳ್ಳಲಾಗಿರುವ ಅಪಾರ್ಟ್ಮೆಂಟ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಜಾಪ್ರಭುತ್ವದ ಮೌಲ್ಯವನ್ನು ಸಾಕಾರಗೊಳಿಸಲು ಚುನಾವಣೆಯಲ್ಲಿ ನಮ್ಮ ಹಕ್ಕು ಚಲಾಯಿಸಲೇಬೇಕು, ಪಾರದರ್ಶಕ ಚುನಾವಣೆಗೆ ಪ್ರತಿಯೊಬ್ಬರು ಮತಚಲಾಯಿಸುವುದು ಅತ್ಯಂತ ಮುಖ್ಯ. ನಗರದ ಮತದಾರರು ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ನಿರಾಸಕ್ತಿ ತೋರುತ್ತಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಮತದಾರನೇ ಪ್ರಭು, ಆತ ತನ್ನ ಹಕ್ಕು ಚಲಾವಣೆಗೆ ಹಿಂದೆಟು ಹಾಕಬಾರದು, ನಾನೇಕೆ ಸರದಿ ಸಾಲಿನಲ್ಲಿ ನಿಲ್ಲಬೇಕು ಎಂಬ ಧೋರಣೆಯು ಇರಬಹುದು, ಅದೇ ರೀತಿ ನನ್ನ ಒಂದು ವೋಟಿನಿಂದ ಏನು ಆಗದು ಎಂಬ ಮನೋಭಾವ ಅಥವಾ ಅತ್ಯಂತ ಉನ್ನತ ಮಟ್ಟದ ಜನ ನಾವು ಎನ್ನುವ ಧೋರಣೆಯ ಆಗಿರಬಹುದು ಅಥವಾ ದುಡಿಯುವ ವರ್ಗದವರು ಆ ಒಂದು ದಿನವನ್ನು ಬಳಸಿ ಹೊರಗೆ ಪ್ರವಾಸ ಹೋಗಲು ತಳೆದಿರುವ ಚಿಂತನೆಗಳೆಲ್ಲಾ ನಗರ ಪ್ರದೇಶದಲ್ಲಿ ಮತದಾನ ಕಡಿಮೆಯಾಗಲು ಕಾರಣಗಳಾಗಿವೆ ಎಂದು ಐಸೆಕ್ ಎಂಬ ಸಂಸ್ಥೆ ನೀಡಿರುವ ವರದಿಗಳಲ್ಲಿ ದಾಖಲಾಗಿವೆ, ಇದಕ್ಕೆ ಪರ್ಯಾಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ 80ಕ್ಕೂ ಹೆಚ್ಚು ಪ್ರತಿಶತ ಮತದಾನವಾಗಿದ್ದು ನಗರ ಪ್ರದೇಶದವರಿಗಿಂತ ತಮ್ಮ ಹಕ್ಕು ಚಲಾವಣೆಯಲ್ಲಿ ಅವರು ಜವಾಬ್ದಾರಿ ತೋರಿದ್ದಾರೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಯಕ್ಷಗಾನ ಕಲೆಯ ಮೂಲಕ ಅಪಾರ್ಟ್ಮೆಂಟ್ನ ನಿವಾಸಿಗಳಿಗೆ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು