ಶಿವಮೊಗ್ಗ : ಪುತ್ರನಿಗೆ ಲೋಕಸಭಾ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡು ಶಿವಮೊಗ್ಗ ಕ್ಷೇತ್ರ ದಿಂದ ಬಂಡಾಯ ಸ್ಪರ್ಧೆ ಘೋಷಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಬುಧವಾರ ದೆಹಲಿಗೆ ಬರುವಂತೆ ಬುಲಾವ್ ಬಂದಿದೆ. ರಾಜ್ಯದಲ್ಲಿ ಮಂಗಳವಾರ ದಿಂದ ಅಧಿಕೃತವಾಗಿ ಪ್ರಚಾರಕ್ಕಿಳಿದಿರುವ ಅಮಿತ್ ಶಾ ಅವರು ಟಿಕೆಟ್ ಹಂಚಿಕೆ ಬಳಿಕ ಪಕ್ಷದಲ್ಲಿ ಭುಗಿಲೆದ್ದಿರುವ ಬಂಡಾಯ ಶಮನಕ್ಕೆ ವಿಶೇಷ ಮುತವರ್ಜಿ ವಹಿಸಿದ್ದು, ಇದರ ಭಾಗವಾಗಿ ಪಕ್ಷದ ಹಿರಿಯ ನಾಯಕ ಈಶ್ವರಪ್ಪ ಅವರಿಗೆ ಖುದ್ದು ಕರೆ ಮಾಡಿ ಮಾತನಾಡಿದ್ದಾರೆ. ಇದೇ ವೇಳೆ ದೆಹಲಿಗೆ ಬಂದು ತಮ್ಮನ್ನು ಭೇಟಿಯಾಗುವಂತೆ ಸೂಚಿಸಿದ್ದಾರೆ. ಈ ವಿಚಾರವನ್ನು ಸ್ವತಃ ಈಶ್ವರಪ್ಪನವರೇ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಖಚಿತಪಡಿಸಿದ್ದು, ತಾವು ದೆಹಲಿಗೆ ತೆರಳುತ್ತಿರುವುದಾಗಿಯೂ ತಿಳಿಸಿದ್ದಾರೆ