ನವದೆಹಲಿ : ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಬಿಜೆಪಿಯ ಬಂಡಾಯ ‘ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ನಿಶ್ಚಿತವಾಗಿದೆ.
ಮಾತುಕತೆ ಸಲುವಾಗಿ ದೆಹಲಿಗೆ ಬರುವಂತೆ ಆಹ್ವಾನಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕರೆಯ ಮೇರೆಗೆ ತೆರಳಿದ್ದ ಈಶ್ವರಪ್ಪ ಅವರಿಗೆ ನಿರಾಸೆ ಉಂಟಾಗಿದ್ದು, ದೆಹಲಿಗೆ ತಲುಪಿದ ಬಳಿಕ ಭೇಟಿ ಕಾರ್ಯಕ್ರಮ ರದ್ದಾಗಿದೆ ಎಂಬ ಮಾಹಿತಿ ಅಮಿತ್ ಶಾ ಅವರ ಕಚೇರಿಯಿಂದ ಬಂದಿದೆ.
ಮಂಗಳವಾರ ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ ಅವರು ದೂರವಾಣಿ ಮೂಲಕ ಈಶ್ವರಪ್ಪ ಅವರನ್ನು ಸಂಪರ್ಕಿಸಿ ಬುಧವಾರ ದೆಹಲಿಗೆ ಬರುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ಬುಧವಾರ ರಾತ್ರಿ ದೆಹಲಿಗೆ ತಲುಪಿದರು. ಆದರೆ, ಅಲ್ಲಿ ಹೋದ ಬಳಿಕ ಭೇಟಿ ಕಾರ್ಯಕ್ರಮ ಇಲ್ಲ. ನೀವು ವಾಪಸ್ ಹೋಗಬಹುದು ಎಂಬ ಅಮಿತ್ ಶಾ ಅವರ ಕಚೇರಿಯ ಸಂದೇಶ ಈಶ್ವರಪ್ಪ ಅವರನ್ನು ತಲುಪಿದೆ. ಹೀಗಾಗಿ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಈಶ್ವರಪ್ಪ ಅವರು ಗುರುವಾರ ವಾಪಸಾಗಲಿದ್ದಾರೆ. ಬೆಳಗ್ಗೆ ಅಮಿತ್ ಶಾ ಅವರ ಕರೆಯ ಬಳಿಕ ಈಶ್ವರಪ್ಪ ಅವರು ರಾಜ್ಯಾಧ್ಯಕ್ಷರನ್ನು ಬದಲಾಯಿಸಿದರೆ ಮಾತ್ರ ನಾನು ಸ್ಪರ್ಧಿಸುವುದಿಲ್ಲ ಎಂಬುದಾಗಿ ದೆಹಲಿಯಲ್ಲಿ ಹೇಳಿ ಬರುತ್ತೇನೆ ಎಂದು ಹೇಳಿಕೆ ನೀಡಿದ್ದರು. ಬಹುಶಃ ಈ ಹೇಳಿಕೆ ಹಿನ್ನೆಲೆಯಲ್ಲಿ ಭೇಟಿ ರದ್ದಾಗಿದೆ ಎನ್ನಲಾಗುತ್ತಿದೆ.