ಕುಂದಾಪುರ: ಕಳೆದ 40 ವರ್ಷಗಳಿಂದ ಹೋರಾಟದ ಮೂಲಕ ರಾಜಕೀಯದಲ್ಲಿ ಬೆಳೆದು ಬಂದಿದ್ದೇನೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರತಿ ಭಾಗಕ್ಕೆ ಭೇಟಿ ನೀಡುತ್ತಿದ್ದೇನೆ. ಸಮಸ್ತ ಹಿಂದೂ ಕಾರ್ಯಕರ್ತರು ಸಂಘಟಿತರಾಗಿ ನನ್ನನ್ನು ಬೆಂಬಲಿಸುತ್ತಿದ್ದಾರೆ. ನನ್ನ ವಿರುದ್ದ ನಡೆಸುತ್ತಿರುವ ಯಾವ ಷಡ್ಯಂತ್ರಕ್ಕೂ ಹೆದರಲಾರೆ. ಈ ಬಾರಿ ಚುನಾವಣೆಯಲ್ಲಿ ಜಯ ಖಚಿತ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಹೆಮ್ಮಾಡಿಯಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಸಬಾರದು ಎನ್ನುವ ಇವರಿಗೆ ಮೋದಿ ಯಾರ ಮನೆಯ ಆಸ್ತಿಯಲ್ಲ, ಜಗತ್ತು ಕಂಡ ಒಬ್ಬ ಶ್ರೇಷ್ಠ ನಾಯಕ ಅನ್ನುವುದು ಗೊತ್ತಿಲ್ಲವೇ? ಅವರ ಭಾವಚಿತ್ರ ಬಳಸುವುದು ಹಿಂದುತ್ವದ ಸಂಘಟಿತ ಶ್ರಮದ ಫಲ. ಹಿಂದೂ ಕಾರ್ಯಕರ್ತರಿಗೆ ಯಾವುದೇ ರೀತಿಯ ತೊಂದರೆಯಾದರೂ ಸಹಿಸುವುದಿಲ್ಲ ಎಂದರು. ಬೆಂಬಲಿಗ ಮುಖಂಡರಾದ ಶ್ರೀಧರ ಬಿಜೂರು, ಗೋಪಾಲಕೃಷ್ಣ ನಾಡ, ಕಟ್ಬೆಲ್ಲೂರು ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗರಾಜ್ ಪುತ್ರನ್, ಮೋಹನ್ ಖಾರ್ವಿ ಉಪ್ಪುಂದ ಪತ್ರಿಕಾಗೋಷ್ಠಿಯಲ್ಲಿದ್ದರು