ಕುಂದಾಪುರ : ನಮ್ಮ ತಲೆಮಾರಿನಲ್ಲಿ ಗದ್ದೆ ಮಾಡುವುದು,ಹೊಳುವುದು ಮಹತ್ವದ್ದಾಗಿತ್ತು.ಈಗಿನ ಕಾಲಘಟ್ಟದಲ್ಲಿ ಮಕ್ಕಳ ಉನ್ನತ ಶಿಕ್ಷಣ ಪಡೆಯುವುದಕ್ಕಾಗಿ ಇರುವ ಕೃಷಿ ಗದ್ದೆ ಹೊಲ ಮಾರಾಟ ಮಾಡುವುದನ್ನು ಕಾಣುತ್ತಿದ್ದೇವೆ .ಶಿಕ್ಷಣದ ಮಹತ್ವಿಕೆ ಹೆಚ್ಚಿದೆ. ಈ ನೆಲೆಯಲ್ಲಿ ಶಿಕ್ಷಕರ ಜವಾಬ್ದಾರಿ ಕೂಡ ಹಿಂದೆಂದಿಗಿಂತಲೂ ಪ್ರಸ್ತುತ ಅತ್ಯಂತ ಮುಖ್ಯ ಎಂದು ನಿವೃತ್ತ ಪ್ರಿನ್ಸಿಪಾಲ್ ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ ಹೇಳಿದರು.
ಸುಣ್ಣಾರಿ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೃತಯುಗದಲ್ಲಿ ಗುರುವಾದವನು ಮಾತು ಕೇಳದ ವಿದ್ಯಾರ್ಥಿಗೆ ಏಟು ನೀಡುತ್ತಿದ್ದ.ತ್ರೇತಾಯುಗದಲ್ಲಿ ಬೈಗುಳದ ಮೂಲಕ ವಿದ್ಯಾರ್ಥಿಗಳನ್ನು ತಿದ್ದಲಾಗುತ್ತಿತ್ತು.ದ್ವಾಪರ ಯುಗದಲ್ಲಿ ಹಂಗಿಸಿ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುತ್ತಿದ್ದರು.ಕಲಿಯುಗದಲ್ಲಿ ಗುರು ಎನಿಸಿಕೊಂಡವ ಶಿಷ್ಯನಿಗೆ ನಮಸ್ಕಾರ ಮಾಡಿ ಪುಣ್ಯಾತ್ಮ ಸರಿ ದಾರಿಯಲ್ಲಿ ನಡಿ ಎಂದು ತಲೆಬಗ್ಗಿಸಿ ಹೇಳುವ ಸ್ಥಿತಿ ಬಂದಿದೆ.ಶಿಕ್ಷಕನಾದವ ದಾರಿ ತಪ್ಪಿದರೆ ಸಮಾಜ ದಾರಿ ತಪ್ಪುತ್ತದೆ.ಅಮೆರಿಕಾದಂತಹ ದೇಶದಲ್ಲಿ ವಿಜ್ಞಾನಿಗಳು,ಶಿಕ್ಷಕರಿಗೆ ಉನ್ನತ ಗೌರವವಿದೆ.ಮುಂದುವರಿದ ಎಲ್ಲ ದೇಶಗಳಲ್ಲೂ ಶಿಕ್ಷಕ ಪದವಿಗೆ ಅತ್ಯುನ್ನತ ಸ್ಥಾನಮಾನವಿದೆ ಎಂದು ಹೇಳಿದರು.
ಸುಣ್ಣಾರಿ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ಉಪ್ಪುಂದ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ ಶೆಟ್ಟಿ,ಬಿಡ್ಕಲ್‌ಕಟ್ಟೆ ಕೆಪಿಎಸ್ ಸ್ಕೂಲ್‌ನ ಮುಖ್ಯ ಶಿಕ್ಷಕ ಕರುಣಾಕರ ಶೆಟ್ಟಿ ಹೇರಂಜಾಲು ಶಾಲೆಯ ಮುಖ್ಯ ಶಿಕ್ಷಕ ಜಯಾನಂದ ಪಟಗಾರ್,ಹಂಗಳೂರು ಶಾಲೆ ಮುಖ್ಯ ಶಿಕ್ಷಕ ಸೀತಾರಾಮ ಶೆಟ್ಟಿ ಗೋಪಾಡಿ ಪಡು ಶಾಲೆ ಸಹಶಿಕ್ಷಕ ಶ್ರೀನಿವಾಸ ಶೆಟ್ಟಿ ಅವರಿಗೆ ಗುರುವಂದನೆ ಸಲ್ಲಿಸಿ ಸನ್ಮಾನಿಸ ಲಾಯಿತು.