ಕುಂದಾಪುರ : ಸರಕಾರದಿಂದ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡಲು ಸಾಧ್ಯವಾಗುದಿಲ್ಲ ಸ್ಥಳೀಯರು ಮತ್ತು ದಾನಿಗಳು ಕೈಜೋಡಿಸಿದರೆ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಮೂಡಿ ಬರುತ್ತದೆ. ವಿದ್ಯಾರ್ಥಿಗಳು ಪಾಠದ ಜೊತೆಗೆ ಪಾಠೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಪೋಷಕರು ಪ್ರೋತ್ಸಾಹ ನೀಡಿದರೆ ಮಕ್ಕಳಲ್ಲಿ ಪ್ರತಿಭೆ ಅರಳಲು ಸಾಧ್ಯವಿದೆ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಹಾಗೂ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲು ಸುಣ್ಣಾರಿ ಕುಂದಾಪುರ ಇವರ ಸಹಯೋಗದೊಂದಿಗೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲಿನ ವಠಾರದಲ್ಲಿ ಶುಕ್ರವಾರ ಜರಗಿದ ಕುಂದಾಪುರ ವಲಯ ಮಟ್ಟದ ಪ್ರತಿಭಾ ಕಾರಂಜಿ 2024-25 ಉದ್ಘಾಟಿಸಿ ಅವರು ಮಾತನಾಡಿದರು
ಸರಕಾರ ಶಿಕ್ಷಣ ಇಲಾಖೆಯಿಂದ ಶೈಕ್ಷಣಿಕ ಬೆಳವಣಿಗೆ ಜೊತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪಾಠೇತರ ಚಟುವಟಿಕೆಗಳನ್ನು ಮಾಡುತ್ತಿದ್ದು, ಇದರಲ್ಲಿ ಮಕ್ಕಳು ಸಕ್ರೀಯವಾಗಿ ಭಾಗವಹಿಸಬೇಕಿದೆ. ಇಂತಹ ಕಾರ್ಯಕ್ರಮಗಳಿಗೆ ಸರಕಾರ ನೀಡುವ ಅನುದಾನ ಸರ್ಟಿಫಿಕೇಟ್ ನೀಡಲು ಸಾಕಾಗುದಿಲ್ಲ. ಆದರೆ ಸ್ಥಳೀಯರ ಮತ್ತು ದಾನಿಗಳ ಸಹಕಾರದಿಂದ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲಾ ನಿರ್ದೇಶಕ ಗಣಪತಿ ಕೆ ದಾನಿ ದಿನೇಶ ಹೆಗ್ಡೆ ಮೊಳಹಳ್ಳಿ, ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಶೆಟ್ಟಿ, ಉಪಾಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ಶುಭಾಂಶನೆಗೈದರು. ಇದೇ ಸಂದರ್ಭ ಕರಾಟೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕಾಲೇಜಿನ ವಿದ್ಯಾರ್ಥಿನಿ ನವಮಿ ಎಸ್. ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು
ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್. ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದ ನೋಡೆಲ್ ಅಧಿಕಾರಿ ಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿ ಅಭಿನಂದನ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಹೈಸ್ಕೂಲಿನ ಮುಖ್ಯೋಪಾಧ್ಯಾಯಿನಿ ಸರೋಜಿನಿ ವಂದಿಸಿದರು.