ಕಾರ್ಕಳ : ಉಡುಪಿ ಜಿಲ್ಲಾ ಪಂಚಾಯತ್, ಪಶು ಸಂಗೋಪನೆ ಹಾಗೂ ಪಶುವೈದ್ಯ ಸೇವಾ ಇಲಾಖೆ ಕಾರ್ಕಳ, ದ ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು, ಉದಯರವಿ ಕಲಾವೃಂದ (ರಿ.), ಮುದ್ದಣ್ಣ ನಗರ, ಸಾಣೂರು ಇವರ ಸಹಭಾಗಿತ್ವದಲ್ಲಿ ಸಾಣೂರು ಗರಡಿ ಬಳಿಯ ಉದಯ ರವಿ ಕಲಾವ್ರಂದ(ರಿ.) ವಠಾರದಲ್ಲಿ “ಮಿಶ್ರ ತಳಿ ಕರು ಮತ್ತು ಹಸು ಪ್ರದರ್ಶನ _ಸ್ಪರ್ಧೆ” ಯನ್ನು ಉದ್ಘಾಟಿಸಿ , ಪಶು ಸಂಗೋಪನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ರೆಡ್ಡಪ್ಪನವರು ಮಾತನಾಡುತ್ತಾ, ” ಪಶು ಸಂಪತ್ತು ದೇಶದ ಶ್ರೇಷ್ಠ *ಸಂಪತ್ತು”. ಕರುಸಾಕಾಣಿಕೆ ಮತ್ತು ಹಸುಗಳ ಪೋಷಣೆಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಿದಾಗ ಮಾತ್ರ ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿಯೂ ಯಶಸ್ಸನ್ನು ಕಾಣಲು ಸಾಧ್ಯ ಎಂದರು
ಗ್ರಾಮೀಣ ಭಾಗದಲ್ಲಿ ಪಶು ಸಂಗೋಪನ ಚಟುವಟಿಕೆಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಇಲಾಖಾ ವತಿಯಿಂದ “ಮಿಶ್ರತಳಿ ಕರು ಮತ್ತು ಹಸು ಪ್ರದರ್ಶನ ಹಾಗೂ ಸ್ಪರ್ಧೆ”ಯನ್ನು ಏರ್ಪಡಿಸುವುದರ ಮೂಲಕ ಹೈನುಗಾರಿಕೆಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವ ಸದುದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು
ಮುಖ್ಯ ಅತಿಥಿಗಳಾಗಿ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೆ.ಪಿ ಸುಚರಿತ ಶೆಟ್ಟಿ, ಕಡಂದಲೆ ಭಾಗವಹಿಸಿ ಮಾತನಾಡುತ್ತಾ, ಕೋವಿಡ್ ಸಂಕಷ್ಟದ ನಂತರ ಕಳೆದೆರಡು ವರ್ಷಗಳಲ್ಲಿ ಚರ್ಮ ಗಂಟು ರೋಗ ಬಾಧೆಯಿಂದ ಸಂಕಷ್ಟಕ್ಕೆ ಒಳಗಾದ ಹೈನುಗಾರಿಕೆಗೆ ಪುನಶ್ಚೇತನ ನೀಡಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ದೃಷ್ಟಿಯಿಂದ “ಮಿಶ್ರ ತಳಿ ಕರು ಸಾಕಾಣಿಕ ಯೋಜನೆಯನ್ನು 1.5 ಕೋಟಿ ರೂಪಾಯಿಯನ್ನು ವಿನಯೋಗಿಸುವುದರ ಮೂಲಕ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಜಾರಿಗೆ ತಂದಿದ್ದು ಈಗಾಗಲೇ ಉಡುಪಿ ಮತ್ತು ದ.ಕ ಜಿಲ್ಲಾ ವ್ಯಾಪ್ತಿಯ *ಏಳು ಸಾವಿರ ಮಿಶ್ರತಳಿ ಹೆಣ್ಣು ಕರುಗಳ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಯುವ ಜನತೆಯನ್ನು ಹೈನುಗಾರಿಕೆಯ ಕಡೆಗೆ ಆಕರ್ಷಿಸುವ ದೃಷ್ಟಿಯಿಂದ ಹಸು ಖರೀದಿ ಸಹಾಯಧನ,ಮಿನಿ ಡೈರಿ ಯೋಜನೆ, ಹಸಿರು ಹುಲ್ಲು ಬೆಳೆಸಲು ವಿಶೇಷ ಪ್ರೋತ್ಸಾಹಕ ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು. ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಣೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಹಾಗೂ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ( ನಿ).ಮಂಗಳೂರು ಇದರ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ರವರು ” ಮಿಶ್ರ ತಳಿ ಕರು ಮತ್ತು ಹಸು ಪ್ರದರ್ಶನ_ ಸ್ಪರ್ಧೆ “ಯ ಬಗ್ಗೆ ಮಾಹಿತಿಯನ್ನು ನೀಡಿದರು.